ಬೆಂಗಳೂರು: ಅಧಿಕಾರದ ಉಳಿವಿಗೆ ಸಂಘದ ಸಿಟ್ಟಿಗೆ ಗುರಿಯಾಗುವ ಅಪಾಯದಿಂದ ಪಾರಾಗಲು ಬೊಮ್ಮಾಯಿ ರಾಜಧರ್ಮ ಮರೆತಿದ್ದಾರೆ. ಮಸೂದ್, ಪ್ರವೀಣ್, ಫಾಜಿಲ್ ಹೀಗೆ ಸರಣಿ ಹತ್ಯೆಗಳು ನಡೆದಾಗ, ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ, ಅಲ್ಲೇ ಪಕ್ಕದ ಮಸೂದ್ ಮನೆಯತ್ತ ತಿರುಗಿಯೂ ನೋಡಲಿಲ್ಲ. ಫಾಜಿಲ್ ನಿವಾಸಕ್ಕೂ ಸಿಎಂ ಬರಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಸಾಂತ್ವನದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಮತ್ತು ಪರಿಹಾರದಲ್ಲೂ ತಾರತಮ್ಯ ತೋರುತ್ತಿದ್ದಾರೆ ಎಂದು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ.
ಬೊಮ್ಮಾಯಿ ಅವರ ತಾರತಮ್ಯದ ನಡೆಯು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ, ನಾಳೆ ಕರಾವಳಿಯತ್ತ ಸಾಂತ್ವನ ಯಾತ್ರೆ ಹೊರಟಿದ್ದಾರೆ. ಮೂರು ಕುಟುಂಬಗಳ ಭೇಟಿಯ ಕಾರ್ಯಕ್ರಮ ನಿಗದಿ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಯ ನಡೆಯ ಬಗ್ಗೆ ಆಕ್ರೋಶಗೊಂಡಿದ್ದು, ರಾಜಧರ್ಮ ಮರೆತ ಸಿಎಂ, ಕೊಲೆಗಡುಕ ಸರಕಾರ ಎಂದೆಲ್ಲಾ ಟೀಕಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಪಕ್ಷಪಾತಕ್ಕೆ ಕಿಡಿಕಾರಿದ್ದು, ಬಸವರಾಜ ಬೊಮ್ಮಾಯಿ ಅವರೇ ನೀವು ಈ ರಾಜ್ಯದ ಮುಖ್ಯಮಂತ್ರಿ. ಸದ್ಯ ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಪ್ರವೀಣ್ ಸಾವಿಗೆ ನೀವು ಸ್ಪಂದಿಸಿದ್ದು ಅನುಕರಣೀಯ. ಆದರೆ ಸತ್ತ ಫಾಜೀಲ್ ಗೆ ಹಾಗೂ ಮಸೂದ್ ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ, ಬೊಮ್ಮಾಯಿಯವರೆ ನೀವು ಈ ರಾಜ್ಯದ ಯಜಮಾನನಿದ್ದಂತೆ. ಯಜಮಾನ ಎಲ್ಲರಿಗೂ ಸಲ್ಲುವನಂತಿರಬೇಕು. ಆದರೆ ನೀವು ಮಾಡಿದ್ದೇನು? ಸತ್ತವರು ಮುಸ್ಲಿಂರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೆ? ಒಟ್ಟಾರೆ, ಕರಾವಳಿಯ ಈ ಕೆಂಡ ತಾರತಮ್ಯದ ತಕ್ಕಡಿಯಲ್ಲಿ ತೂಗುತ್ತಿದ್ದು, ಕೇವಲ ಬಿಜೆಪಿಯ ಮತ ರಾಜಕಾರಣ ಅಡಕವಾಗಿದೆ ಎಂದು ಹೇಳಿದ್ದಾರೆ.