ಕರ್ನಾಟಕದ ಹಲವೆಡೆ ಭಾರೀ ಮಳೆ; ಡಿಸಿಗಳ ಜತೆ ಇಂದು ಸಿದ್ದರಾಮಯ್ಯ ವಿಡಿಯೋ ಸಂವಾದ

Prasthutha|

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಗೆ ಮತ್ತು ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಂದ ವಿವರವಾದ ವರದಿ ಕೋರಿದ್ದಾರೆ.

- Advertisement -

ಜತೆಗೆ, ಇಂದು (ಮಂಗಳವಾರ) ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಕಡೆಗಳಲ್ಲಿ ವಸತಿ ಪ್ರದೇಶಗಳು ಜಲಾವೃತವಾಗಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಹಗಲಿನ ವೇಳೆ ಹಲವು ತಾಸು ತುಂತುರು ಮಳೆಯಾಗಿದೆ ಮತ್ತು ಮೋಡ ಕವಿದ ವಾತಾವರಣವಿತ್ತು.

- Advertisement -

ಮುಂಗಾರು ಹಂಗಾಮಿನಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಾನಿ ಹಾಗೂ ಮಳೆ ಕೊರತೆ ಕುರಿತು ಜಿಲ್ಲಾವಾರು ವರದಿ ನೀಡುವಂತೆ ಸಿದ್ದರಾಮಯ್ಯ ಈ ಹಿಂದೆ ಕೇಳಿದ್ದರು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ. ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಕರ್ನಾಟಕದ ನಯಾಗರ ಎಂದೇ ಖ್ಯಾತವಾಗಿರುವ ಗೋಕಾಕ ಜಲಪಾತ ಪೂರ್ಣ ವೈಭವದಿಂದ ಹರಿಯುತ್ತಿದೆ.

ಸಕಲೇಶಪುರ ಪಟ್ಟಣದ ಸಮೀಪ ಮರಗಳು ಉರುಳಿಬಿದ್ದು, ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಮಡಿಕೇರಿ ಬಳಿ ಹೆದ್ದಾರಿಗೆ ಗುಡ್ಡ ಜರಿದು ಬಿದ್ದು ಹಾಗೂ ಮರ ಬಿದ್ದ ಪರಿಣಾಮ ಮಡಿಕೇರಿ ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿತ್ತು.

ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನದಿಗಳು, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭಾರೀ ಮಳೆಗೆ ಸುಮಾರು 50 ಮನೆಗಳಿಗೆ ಹಾನಿಯಾಗಿದ್ದು, 300 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. 10 ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗಿವೆ.

ಜನರಿಗೆ ಸಹಾಯ ಮಾಡಲು ಗೃಹರಕ್ಷಕರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ

Join Whatsapp