ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿದ್ದ ಬಿ. ವೀರಪ್ಪ ಅವರಿಗೆ ಇಂದು(ಬುಧವಾರ) ಸನ್ಮಾನಿಸಿ ಬೀಳ್ಕೊಡಲಾಯಿತು.
ಬೆಂಗಳೂರು ವಕೀಲ ಸಂಘದಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬಿ.ವೀರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ, ಕಂಚಿನ ವೆಂಕಟೇಶ್ವರ ಮೂರ್ತಿ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಭಾಗಿ ಆಗಿದ್ದರು.
ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಅಷ್ಟೇ: ನ್ಯಾಯಮೂರ್ತಿ ಬಿ.ವೀರಪ್ಪ
ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಅಷ್ಟೇ. ನ್ಯಾಯಮೂರ್ತಿ ಆದಾಗ ಆದ ಖುಷಿಗಿಂತ ಈಗ ಹೆಚ್ಚು ಖುಷಿ ಆಗ್ತಿದೆ. ಚಿಕ್ಕವನಿದ್ದಾಗ ತಂಬೂರಿಯವನು ನಮ್ಮ ತಾಯಿ ಬಳಿ ಭವಿಷ್ಯ ಹೇಳಿದ್ದ. ನಿನ್ನ ಮಗ ಬಹಳ ತಲೆಹರಟೆ ಇದ್ದಾನೆ, ಮುಂದೆ ಕಷ್ಟ ಅಂತ ಹೇಳಿದ್ದ. ಆಗ ತಂಬೂರಿ ಮಾತು ಕೇಳಿ ನನ್ನ ತಾಯಿ ಕಣ್ಣೀರು ಹಾಕಿದ್ರು.
ನಾನು ತಂಬೂರಿ ಒಡೆದು ಹಾಕಿದ್ದೆ. 40 ವರ್ಷದ ಹಿಂದೆ ಬೆಂಗಳೂರಿಗೆ ಬಂದಾಗ ನಾನು ಅಪರಿಚಿತ. ಇಂದು 7 ಕೋಟಿ ಕನ್ನಡಿಗರು ನನ್ನವರು ಎಂದು ಹೇಳಿದರು.
ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ನ್ಯಾ.ಬಿ.ವೀರಪ್ಪ ಮಾಡಿದ್ದಾರೆ: ಸಿಎಂ
ಸಿಎಂ ಸಿದ್ದರಾಮಯ್ಯ ಮಾತನಾಡಿ, ನ್ಯಾಯಮೂರ್ತಿಯಾಗಿ ಬಿ.ವೀರಪ್ಪ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ವೀರಪ್ಪ ಹೈಕೋರ್ಟ್ ನ್ಯಾಯಮೂರ್ತಿ ಆದರು. ಇಂದು ಸಿಎಂ ಆಗಿದ್ದೇನೆ, ನಿವೃತ್ತಿ ಹೊಂದುತ್ತಿದ್ದಾರೆ, ಇದು ಕಾಕತಾಳೀಯ. ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸವಲತ್ತುಗಳು ಸಿಗಬೇಕು ಎಂದರು.
ನ್ಯಾಯಮೂರ್ತಿ ಬಿ.ವೀರಪ್ಪನವರು ಗ್ರಾಮೀಣ ಭಾಗದಿಂದ ಬಂದವರು. ದುರ್ಬಲ ವರ್ಗದ ಜನರ ಕಷ್ಟ ವೀರಪ್ಪನವರಿಗೆ ಚೆನ್ನಾಗಿ ಗೊತ್ತಿರುತ್ತದೆ. ದುರ್ಬಲ ವರ್ಗದ ಜನ ಪ್ರಬಲ ವರ್ಗದವರ ವಿರುದ್ಧ ಹೋಗಲು ಆಗಲ್ಲ. ಕೋರ್ಟ್ಗಳಿಗೆ ಹೋಗಲು ಸಾಧ್ಯವಾಗದ ಸಾಕಷ್ಟು ಉದಾಹರಣೆ ಇವೆ. ಅಂಥವರಿಗೆ ನ್ಯಾಯ ಕೊಡಿಸುವ ಕೆಲಸ ನ್ಯಾ.ಬಿ.ವೀರಪ್ಪ ಮಾಡಿದ್ದಾರೆ. ನ್ಯಾ.ಬಿ.ವೀರಪ್ಪ ಸತತ 8 ವರ್ಷ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರವೂ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಹೇಳಿದರು.
ನ್ಯಾ.ಬಿ.ವೀರಪ್ಪ ತಮ್ಮ ಕೆಲಸದ ಮೂಲಕ ರಾಜ್ಯದ ಹೃದಯ ಗೆದ್ದಿದ್ದಾರೆ: ಡಿಸಿಎಂ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ದೊಡ್ಡ ಸ್ಥಾನದಲ್ಲಿದೆ. ನ್ಯಾ. ಬಿ.ವೀರಪ್ಪನವರ ಕಾರ್ಯದಿಂದ ರಾಜಕಾರಣಿ ಕಲಿಯುವುದು ಸಾಕಷ್ಟಿದೆ. ತಮ್ಮ ಕೆಲಸದ ಮೂಲಕ ರಾಜ್ಯದ ಹೃದಯ ಗೆದ್ದಿದ್ದಾರೆ. ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.