ಪುಲ್ವಾಮಾ ದುರಂತದ ಸತ್ಯ ಹೇಳಿದ ಸತ್ಯಪಾಲ್‌ ಮನೆ ಮೇಲೆ ಸಿಬಿಐ ದಾಳಿ: ಸಿಎಂ ಸಿದ್ದರಾಮಯ್ಯ

Prasthutha|

- Advertisement -

ಬೆಂಗಳೂರು: ದೇಶದ ಗಡಿಭಾಗ ಕಾಶ್ಮೀರದಲ್ಲಿ ನಡೆದ ಪುಲ್ವಾಮ ದುರಂತದ ಬಗ್ಗೆ ಅಂದಿನ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ಸತ್ಯ ಹೇಳಿದ್ದರಿಂದಲೇ ಅವರ ಮನೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ದಾಳಿ ಮಾಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ’40 ದೇಶಪ್ರೇಮಿ ಸೈನಿಕರನ್ನು ಬಲಿತೆಗೆದುಕೊಂಡ ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿದ್ದೇ ಮಾಜಿ ರಾಜ್ಯಪಾಲರು ಮತ್ತು ಬಿಜೆಪಿ ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸತ್ಯಪಾಲ್ ಮಲಿಕ್ ಅವರ ಅಪರಾಧವಾಗಿ ಹೋಯಿತು. ನಿರೀಕ್ಷೆಯಂತೆ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿ, ಬೆದರಿಸುವ ಪ್ರಯತ್ನ ಮಾಡಿದೆ’ ಎಂದು ಆರೋಪಿಸಿದ್ದಾರೆ.

- Advertisement -

ಪುಲ್ವಾಮ ದುರಂತ ನಡೆದ ಸಮಯದಲ್ಲಿ ಸತ್ಯಪಾಲ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಕಾರಣ ಕೇಂದ್ರದ ವಿರುದ್ಧದ ಅವರ ಆರೋಪವನ್ನು ತಳ್ಳಿಹಾಕಲಾಗದು. ಸತ್ಯವನ್ನು ಎದುರಿಸಲಾಗದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಅವರಿಗೆ ಸಿಬಿಐ ತನಿಖೆ ಮೂಲಕ ಚಿತ್ರಹಿಂಸೆ ನೀಡಲು ಹೊರಟಿದೆ, ಈ ಕೃತ್ಯ ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ತನ್ನ ದುಷ್ಟಬುದ್ದಿಯನ್ನು ತಿದ್ದಿಕೊಂಡು, ಸತ್ಯಪಾಲ್ ಮಲಿಕ್ ಅವರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂದುವರೆದು ‘ಸತ್ಯವನ್ನು ಸಹಿಸದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಶ್ನಿಸುವವರ ವಿರುದ್ಧ ಐಟಿ, ಇಡಿ, ಸಿಬಿಐಗಳನ್ನು ಛೂ ಬಿಟ್ಟು ಬಲತ್ಕಾರದಿಂದ ಬಾಯಿ ಮುಚ್ಚಿಸುವ ಪ್ರಯತ್ನನ್ನು ಮುಂದುವರಿಸಿದ್ದಾರೆ. ಆದರೆ ದೇಶದ ಜನತೆ ಇಂತಹ ಕುಟಿಲ ಕಾರಸ್ತಾನಗಳನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.



Join Whatsapp