ಆರ್ಥಿಕ ಸ್ಥಿರತೆ ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು ಎಂದ ಸಿ.ಎಂ. ಬೊಮ್ಮಾಯಿ

Prasthutha|

ಬೆಂಗಳೂರು: ಹಣಕಾಸಿನ ಇತಿಮಿತಿಗಳು ಹಾಗೂ ಅವಶ್ಯಕ ಖರ್ಚುಗಳನ್ನು ನಿಭಾಯಿಸುವುದರ ನಡುವೆ ಉತ್ತಮ ಬಜೆಟ್ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ವೇಗ, ಜನಕಲ್ಯಾಣ , ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯವನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದರು.
ಆಯವ್ಯಯ ಎಂದರೆ ರಾಜ್ಯದ ಹಣಕಾಸಿನ ಸ್ಥಿತಿ, ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳು,, ಹಣಕಾಸಿನ ನಿರ್ವಹಣೆಯ ದಿಕ್ಸೂಚಿಯನ್ನು ತೋರಿಸುವ ಅಂದಾಜು. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ, ರಾಜ್ಯದ ಆದಾಯ ಹೆಚ್ಚುತ್ತದೆ ಎಂದರು.
ಶೇ. 16 ರಷ್ಟು ಬಜೆಟ್ ಗಾತ್ರ ಹೆಚ್ಚಳ ರಾಜ್ಯ ಆರ್ಥಿಕ ಪ್ರಗತಿಯನ್ನು ಬಿಂಬಿಸುತ್ತದೆ :
2022-23ರಲ್ಲಿ 14,699 ಕೋಟಿ ವಿತ್ತೀಯ ಕೊರತೆ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜವರಿವರೆಗೆ 5,996 ಕೋಟಿ ರೂ.ಗೆ ಕಡಿಮೆಗೊಳಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಆದಾಯ ಹೆಚ್ಚಳವನ್ನು ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕ ಆರ್ಥಿಕ ನಿರ್ವಹಣೆಯಲ್ಲಿ ಕ್ರಮಬದ್ಧತೆಯನ್ನು ಸಾಧಿಸಿದೆ. ಕೋವಿಡ್ ನಂತರದ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಆದಾಯ ಹೆಚ್ಚಳವಾಗುತ್ತಿರುವುದು, ರಾಜ್ಯದ ಅಂತರ್ಗತವಾದ ಆರ್ಥಿಕ ಶಕ್ತಿ , ಜನರ ಪರಿಶ್ರಮದಿಂದ ಸಾಧ್ಯವಾಗಿರುವ ಕಾರಣ, ರಾಜ್ಯದ ಜನರನ್ನು ಅಭಿನಂದಿಸುತ್ತೇನೆ. ಈ ಬಾರಿಯ 3,09,182 ಕೋಟಿ ರೂ.ಗಳ ಬಜೆಟ್ ಮಂಡಿಸಲಾಗಿದೆ. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಶೇ.16 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯ ಆರ್ಥಿಕ ಪ್ರಗತಿಯ ವೇಗ ಉನ್ನತ ಮಟ್ಟದಲ್ಲಾಗುತ್ತಿರುವುದನ್ನು ನಿರೂಪಿಸುತ್ತದೆ ಎಂದರು.
402 ಕೋಟಿ ರೂ. ಆದಾಯ ಹೆಚ್ಚಳ -ಆರ್ಥಿಕ ನಿರ್ವಹಣೆಯ ಪ್ರತಿಬಿಂಬ :
ಕೇಂದ್ರದ ತೆರಿಗೆಯಲ್ಲಿ ರಾಜ್ಯದ ತೆರಿಗೆ ಪಾಲು 37252 ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ(ಕಳೆದ ಸಾಲಿಗಿಂತ ಶೇ. 25 ರಷ್ಟು ಹೆಚ್ಚಿನ ಗುರಿ). ಕೇಂದ್ರ ಸರ್ಕಾರದಿಂದ ಡಿಬಿಟಿ ಸೇರಿದಂತೆ ರಾಜ್ಯಕ್ಕೆ ಅನುದಾನ ಹೆಚ್ಚಾಗಿದೆ. 2023-24ರಲ್ಲಿ ಕರ್ನಾಟಕ ರಾಜ್ಯ 402 ಕೋಟಿ ಆದಾಯ ಹೆಚ್ಚಳವನ್ನು(revenue surplus) ಸಾಧಿಸಿರುವುದು, ರಾಜ್ಯದ ಆರ್ಥಿಕ ನಿರ್ವಹಣೆಯ ಪ್ರತಿಬಿಂಬವಾಗಿದೆ. ರಾಜಸ್ಥಾನ ಹಾಗೂ ಕೇರಳ ರಾಜ್ಯಗಳು ಆದಾಯ ಕೊರತೆ(revenue deficit)ಯನ್ನು ತೋರಿಸುತ್ತಿದೆ ಎಂದರು.

- Advertisement -

ಬಂಡವಾಳ ವೆಚ್ಚಕ್ಕಾಗಿ ಸಾಲದ ಬಳಕೆ :
ಒಟ್ಟು ಜಿಎಸ್ ಡಿಪಿಯ ಶೇ. 25 ರೊಳಗೆ ರಾಜ್ಯದ ಒಟ್ಟು ಸಾಲವಿರಬೇಕೆಂಬ ನಿಯಮವಿದ್ದು, ಈ ನಿಯಮವನ್ನು ಪಾಲಿಸಲಾಗಿರುವುದರಿಂದ ಈ ಬಾರಿಯ ಬಜೆಟ್ ಸರ್ ಪ್ಲಸ್ ಬಜೆಟ್ ಆಗಿದೆ. ಕೋವಿಡ್ ಮುನ್ನ ಹಾಗೂ ನಂತರದ ಆರ್ಥಿಕತೆಯನ್ನು ಹೋಲಿಸುವುದು ಸೂಕ್ತವಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಹಿಂಜರಿಕೆಯಾಯಿತು. ನನ್ನ ಅವಧಿಯಲ್ಲಿ ಹೆಚ್ಚಿನ ಸಾಲ ಪಡೆಯುವ ಅವಕಾಶವಿದ್ದರೂ, ಸಾಲದ ಮೊತ್ತವನ್ನು ಕೇವಲ 67 ಸಾವಿರ ಕೋಟಿ ಸೀಮಿತಗೊಳಿಸಿದ್ದೇನೆ. ಈ ಸಾಲವನ್ನು ಕೇವಲ ಬಂಡವಾಳ ವೆಚ್ಚಗಳಿಗೆ ಬಳಕೆಯಾಗಿದೆ ಎಂದರು.
ಹೆಚ್ಚು ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು :
ರಾಜ್ಯ ಸರ್ಕಾರ 65 ವರ್ಷಗಳ ಅವಧಿಯಲ್ಲಿ ಒಟ್ಟು1,30,000 ಕೋಟಿ ಸಾಲ ಪಡೆದಿರಬಹುದು. ಆದರೆ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೇವಲ 5 ವರ್ಷದ ಅವಧಿಯಲ್ಲಿ 1,30,000 ಕೋಟಿ ಸಾಲ ತೆಗೆದುಕೊಂಡರು. ಅವರ ಅವಧಿಯಲ್ಲಿ ಸಾಲ ಪಡೆಯಬಹುದಾದ ಗರಿಷ್ಟ ಮಿತಿಯಲ್ಲಿ ಶೇ. 82.3 ರಷ್ಟು ತೆಗೆದುಕೊಂಡರೆ, ನಮ್ಮ ಸರ್ಕಾರ ಕೇವಲ 71% ರಷ್ಟು ಅವಕಾಶವನ್ನು ಬಳಸಿಕೊಂಡಿದೆ. 2020-21 ರಲ್ಲಿ ಕೇಂದ್ರ ಸರ್ಕಾರದಿಂದ 5 % ವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದರೂ, ನಮ್ಮ ಸರ್ಕಾರ ಕೇವಲ ಶೇ. 3 ರಷ್ಟನ್ನು ದಾಟಿಲ್ಲ. ಆದ್ದರಿಂದ ನಮ್ಮ ಅವಧಿಯಲ್ಲಿ ಬಹಳ ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಾಲವನ್ನು ತೀರಿಸುವ ಕ್ಷಮತೆ ನಮ್ಮ ಸರ್ಕಾರಕ್ಕಿದೆ ಎಂದರು.

Join Whatsapp