ಪಾರ್ಥ ಚಟರ್ಜಿ ಅವರಿಂದ ಅಂತರ ಕಾಯ್ದುಕೊಂಡ ಸಿಎಂ ಮಮತಾ ಬ್ಯಾನರ್ಜಿ

Prasthutha|

ಕೊಲ್ಕತ್ತಾ: ಬಂಧನಕ್ಕೊಳಗಾಗಿರುವ ಸಚಿವ ಪಾರ್ಥ ಚಟರ್ಜಿಯವರಿಂದ ತೃಣಮೂಲ ಕಾಂಗ್ರೆಸ್ಸಿನ ನಾಯಕತ್ವವು ಅಂತರ ಕಾಯ್ದುಕೊಂಡಿದೆ.

- Advertisement -

ಶಿಕ್ಷಕ ನೇಮಕಾತಿ ಹಗರಣದಲ್ಲಿನ ಬಹು ಕೋಟಿ ನಗದು ಸಿಕ್ಕ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಿಂದಿನ ಶಿಕ್ಷಣ ಮಂತ್ರಿ ಪಾರ್ಥ ಚಟರ್ಜಿಯವರನ್ನು ಶನಿವಾರ ಬಂಧಿಸಿದ್ದರು.

ಪಾರ್ಥ ಚಟರ್ಜಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಫೋನು ಮಾಡಿದರೂ ಮಮತಾ ಅದಕ್ಕೆ ಮಹತ್ವ ನೀಡಿಲ್ಲ. ಪಕ್ಷದ ನಾಯಕಿಯಾದ ಅವರೇ ಪಾರ್ಥ ಅವರಿಂದ ಅಂತರ ಕಾಯ್ದುಕೊಂಡು ಬಂಧನದ ಮೆಮೋ ಬರೆದುದರಿಂದ ಇತರ ಟಿಎಂಸಿ ನಾಯಕರು ಕೂಡ ಪಾರ್ಥ ಅವರ ಬಂಧನದ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.

- Advertisement -

ಆರೆಸ್ಟ್ ಮೆಮೋ ಬರೆಯುವಾಗ ಬಂಧಿತ ವ್ಯಕ್ತಿಗೆ ಯಾರನ್ನಾದರೂ ಮಾತನಾಡಿಸುವುದಿದೆಯೇ ಎಂದು ಕೇಳುತ್ತಾರೆ. ಪಾರ್ಥ ಚಟರ್ಜಿಯವರು ಮಮತಾ ಬ್ಯಾನರ್ಜಿಯವರ ಹೆಸರು ಹೇಳಿದ್ದಾರೆ. ಇದು ಮಮತಾರನ್ನು ಭಾರೀ ಸಿಟ್ಟಿಗೆಬ್ಬಿಸಿದೆ.

ಬಂಧನಕ್ಕೆ ಮೊದಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ ಪಾರ್ಥರು “ಅವರು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತಾರೆ ಎಂದು ನನಗೆ ಗೊತ್ತಿಲ್ಲ. ನಾನು ನಮ್ಮ ಸುಪ್ರೀಮೋ ಮಮತಾ ಬ್ಯಾನರ್ಜಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.

ನಿನ್ನೆ ಸಂಜೆ ನಾಲ್ವರು ತೃಣಮೂಲ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವು ಪಾರ್ಥ ಚಟರ್ಜಿಯವರಿಗೆ ಸಂಬಂಧಿಸಿದ್ದೇ ಹೊರತು ಪಕ್ಷಕ್ಕಲ್ಲ ಎಂದು ಹೇಳಿದ್ದರು.

ಕೊಲ್ಕತ್ತ ಮೇಯರ್ ಫಿರ್ಹದ್ ಹಕೀಮ್ ಅವರು ಪತ್ರಿಕಾಗೋಷ್ಠಿಯಲ್ಲಿ, “ಬಂಧಿಸಿದ ಬೆನ್ನಿಗೆ ಅವರ ಮೊಬೈಲ್ ಅನ್ನು ತನಿಖಾ ದಳದವರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಮೂರ್ನಾಲ್ಕು ಬಾರಿ ಮಮತಾ ಬ್ಯಾನರ್ಜಿಯವರೊಡನೆ ಮಾತನಾಡಲು ಪ್ರಯತ್ನಿಸಿದೆ ಎಂಬ ಅವರ ಮಾತಿನ ಸತ್ಯ ಇರಲಿಕ್ಕಿಲ್ಲ” ಎಂದರು.

ಪಾರ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದೂ ಪಕ್ಷ ಪ್ರಮುಖರು ಸ್ಪಷ್ಟ ಪಡಿಸಿದ್ದಾರೆ.



Join Whatsapp