ಬೆಂಗಳೂರು: ಕರಾವಳಿ ಸಹಿತ ರಾಜ್ಯದ ಎಲ್ಲಾ ಚರ್ಚ್ ಗಳಲ್ಲೂ ಸಂಪ್ರದಾಯದಂತೆ ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಲು ಕ್ರೈಸ್ತ ಸಮುದಾಯವು ಸರ್ಕಾರಕ್ಕೆ ಮನವಿ ಮಾಡಿದೆ.
ಸಾಮಾಜಿಕ ಹೋರಾಟಗಾರರೂ ಆದ ಹಿರಿಯ ಪತ್ರಕರ್ತ ಆಲ್ವಿನ್ ಮೆಂಡೋನ್ಸಾ ಅವರು ಈ ವಿಚಾರದಲ್ಲಿ ಮುಂದಾಳುತ್ವ ವಹಿಸಿದ್ದು ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಮನವಿಗಳನ್ನು ಸಲ್ಲಿಸಿದ್ದಾರೆ.
‘ವಿವಿಧತೆಯಲ್ಲಿ ಏಕತೆ’ ಎಂಬುದು ನಮ್ಮ ದೇಶದ ವೈಶಿಷ್ಟ್ಯ ಎಂಬುದು ಸತ್ಯ. ಬಹುಶಃ ಅದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯನ್ನು ನೀಡಿ ಗೆದ್ದು ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಸರ್ಕಾರವು ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ನೀಡಿರುವ ಭರವಸೆಯನ್ನು ಈಡೇರಿಸಬೇಕೆಂದು ಆಲ್ವಿನ್ ಮೆಂಡೋನ್ಸಾ ಒತ್ತಾಯಿಸಿದ್ದಾರೆ.
ಏನಿದು ಕ್ರಿಸ್ಮಸ್ ವಿಚಾರ?
‘ಕ್ರಿಸ್ಮಸ್’ ಎಂಬುದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಹಬ್ಬ. ಜಗತ್ತಿಗೆ ಶಾಂತಿಯನ್ನು ಬೋಧಿಸಿ ಪರಮಾತ್ಮನಾಗಿರುವ ಪ್ರಭು ಏಸು ಕ್ರಿಸ್ತನ ಜನ್ಮ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಶಾಂತಿಯ ಸಂದೇಶವನ್ನು ಸಾರುವುದೇ ಕ್ರಿಸ್ಮಸ್ ಹಬ್ಬ. ಹಾಗಾಗಿಯೇ ದೇಶದೆಲ್ಲೆಡೆ, ಹಾಗೂ ರಾಜ್ಯಾದ್ಯಂತ ಡಿಸೆಂಬರ್ 24ರ ಮಧ್ಯರಾತ್ರಿವರೆಗೂ ಚರ್ಚ್‌ಗಳಲ್ಲಿ ಪ್ರಾರ್ಥನೆ ಕಾರ್ಯಕ್ರಮಗಳು ನೆರವೇರುತ್ತವೆ. ಎಸು ಕ್ರಿಸ್ತನ ಜನ್ಮದಿನವಾದ ಡಿಸೆಂಬರ್ 25ರ ಆರಂಭದ ಗಳಿಗೆಯಲ್ಲೇ ಡಿಸೆಂಬರ್ 24ರ ಮಧ್ಯರಾತ್ರಿ ಕ್ರಮಿಸುವ ಸಂದರ್ಭದಲ್ಲೇ ವಿಶೇಷ ಪ್ರಾರ್ಥನೆ ನೆರವೇರುವುದು ಶತಮಾನಗಳಿಂದಲೇ ಇರುವ ಸಂಪ್ರದಾಯ. ಈ ಸಾಂಪ್ರದಾಯಿಕ ಆಚರಣೆಯು ಕೆಲವು ವರ್ಷಗಳ ಹಿಂದಿನವರೆಗೂ ದಕ್ಷಿಣಕನ್ನಡ ಸಹಿತ ರಾಜ್ಯದೆಲ್ಲೆಡೆ ಚರ್ಚ್ ಗಳಲ್ಲೂ ತಡರಾತ್ರಿವರೆಗೂ ನೆರವೇರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭದ್ರತೆಯ ನೆಪವೊಡ್ಡಿ ಕ್ರಿಸ್ಮಸ್ ಹಬ್ಬದ ರಾತ್ರಿ ಪ್ರಾರ್ಥನೆಗೆ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದಾಗಿ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮಂಗಳೂರು ಮೂಲದ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಎಲ್ಲಾ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುತ್ತಿರುವ ಕರ್ನಾಟಕ ಸರ್ಕಾರ ಕ್ರೈಸ್ತ ಸಮುದಾಯದ ವಿಚಾರದಲ್ಲಿ ತಾರತಮ್ಯ ನಡೆಸುತ್ತಿರುವುದು ಸರಿಯಲ್ಲ ಎಂದವರು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.