ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಹಿಮಪಾತದಿಂದ ಹುತಾತ್ಮರಾದ ಯೋಧ ಅಲ್ತಾಫ್ ಅಹಮ್ಮದ್ ಅವರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ದೇಶ ಕಾಯುವ ವೇಳೆ ಯೋಧ ಮೃತಪಟ್ಟಿದ್ದಾನೆ. ಅವರ ಕುಟುಂಬ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಸ್ವಂತ ಮನೆಯಿಲ್ಲ. ಶಿವಮೊಗ್ಗದಲ್ಲಿ ಕೊಲೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಯೋಧರ ಸಾವಿಗೂ ಸರ್ಕಾರ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ವಿಧಾನ ಪರಿಷತ್ ನಲ್ಲಿ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀವು ಓದಿದ ಶೂನ್ಯವೇಳೆಯ ಸೂಚನಾ ಪತ್ರವನ್ನು ಮತ್ತೊಮ್ಮೆ ಓದಿ ಎಂದು ಒತ್ತಾಯಿಸಿದರು.
“ಅದರಲ್ಲಿ ಏನಾಗಿದೆ” ಎಂದು ಇಬ್ರಾಹಿಂ ಗೊಂದಲಕ್ಕೆ ಒಳಗಾದರು. ನೀವು ಓದಿದ್ದರಲ್ಲಿ ಜಮ್ಮು ಕಾಶ್ಮೀರ ದೇಶ ಎಂದು ಹೇಳಲಾಯಿತು ಎಂದಾಗ, ಆ ರೀತಿ ಹೇಳಿರಲಿಕ್ಕಿಲ್ಲ, ಆದರೂ ಕ್ಷಮೆ ಇರಲಿ ಎಂದು ಇಬ್ರಾಹಿಂ ಹೇಳಿದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ದೇಶಕ್ಕಾಗಿ ಮೃತಪಟ್ಟವರು ಯಾರೇ ಇರಲಿ. ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವಗಳನ್ನು ಸರ್ಕಾರ ತಲುಪಿಸಲಿದೆ. ಯೋಧರಿಗೆ ನೀಡುವ ಗೌರವದಲ್ಲಿ ಲೋಪವಾಗಲು ಬಿಡುವುದಿಲ್ಲ ಎಂದರು.
ಅಲ್ತಾಫ್ ಅವರ ಮನೆಗೆ ಒಮ್ಮೆ ಭೇಟಿ ನೀಡಿ ಎಂದು ಸಿ.ಎಂ.ಇಬ್ರಾಹಿಂ ಸಲಹೆ ನೀಡಿದರು.