ಚಂಡೀಗಢ: ಪಂಜಾಬಿನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿಯವರು ಗುಪ್ತಚರ, ಗಣಿಗಾರಿಕೆ ಮತ್ತು ಇಂಧಣ ಖಾತೆಗಳನ್ನು ತಾನಿಟ್ಟುಕೊಂಡು ಉಪ ಮುಖ್ಯಮಂತ್ರಿ ಸುಖ್ ಜಿಂದರ್ ಸಿಂಗ್ ರಾಂಧವಾರಿಗೆ ಗೃಹ ಖಾತೆ ವಹಿಸಿಕೊಟ್ಟಿದ್ದಾರೆ.
ಎರಡು ದಿನಗಳ ಹಿಂದೆ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ತನ್ನ ಸಂಪುಟದ ಸದಸ್ಯರಿಗೆ ಮಂಗಳವಾರ ಮುಖ್ಯಮಂತ್ರಿ ಚನ್ನಿ ಅವರು ಖಾತೆಗಳನ್ನು ಹಂಚಿದ್ದಾರೆ.
ಮುಖ್ಯಮಂತ್ರಿಗಳು ಮೇಲಿನ ಖಾತೆಗಳಲ್ಲದೆ ಸಿಬ್ಬಂದಿ, ಸಾಮಾನ್ಯ ಆಡಳಿತ, ನ್ಯಾಯ, ಶಾಸನ, ಕಲಾಪ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಪರಿಸರ, ನಾಗರಿಕ ವಿಮಾನಯಾನ, ಅಬಕಾರಿ, ಹೂಡಿಕೆ ವೃದ್ಧಿ, ಆತಿಥ್ಯ, ಪ್ರವಾಸೋದ್ಯಮ, ಸಾಂಸ್ಕೃತಿಕ ಸಂಪರ್ಕ ಖಾತೆಗಳನ್ನು ಸಹ ಇರಿಸಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ರಾಂಧವಾರಿಗೆ ಗೃಹವಲ್ಲದೆ ಬಂಧೀಖಾನೆ, ಸಹಕಾರ, ಖಾತೆಗಳನ್ನು ಸಹ ಕೊಡಲಾಗಿದೆ. ಇನ್ನೊಬ್ಬ ಉಪ ಮುಖ್ಯಮಂತ್ರಿ ಓ. ಪಿ. ಸೋನಿ ಅವರಿಗೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಜೊತೆಗೆ ಭದ್ರತಾ ಸೇವೆ, ಸ್ವಾತಂತ್ರ್ಯ ಹೋರಾಟಗಾರರ ಕಲ್ಯಾಣಗಳನ್ನೂ ನೀಡಲಾಗಿದೆ.
ರಾಣಾ ಗುರ್ಜಿತ್ ರಿಗೆ ತಾಂತ್ರಿಕ ಶಿಕ್ಷಣ, ಕೈಗಾರಿಕಾ ತರಬೇತಿ, ಉದ್ಯೋಗ ಸೃಷ್ಟಿ ಹಾಗೂ ತರಬೇತಿ, ತೋಟಗಾರಿಕೆ, ನೀರಾವರಿ ಖಾತೆಗಳನ್ನು ನೀಡಲಾಗಿದೆ. ರಣದೀಪ್ ನಭಾ ಕೃಷಿ ಸಿಕ್ಕಿದೆ. ರೈತರ ಹಿತರಕ್ಷಣೆ ಜವಾಬ್ದಾರಿ ಸಹ ನೀಡಲಾಗಿದೆ. ಮಾಜೀ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಾನೇ ಕೃಷಿ ಖಾತೆ ಹೊಂದಿದ್ದರು.
ಪರಗತ್ ಸಿಂಗ್ ರಿಗೆ ಶಿಕ್ಷಣ, ಕ್ರೀಡೆಗಳ ಜೊತೆಗೆ ಅನಿವಾಸಿ ಭಾರತೀಯರ ಸಂವಹನ ಖಾತೆ ಕೊಡಲಾಗಿದೆ.
ಅಮ್ರೀಂದರ್ ಸಿಂಗ್ ರಾಜಾ ಸಾರಿಗೆ ಸಂಚಾರ ಖಾತೆ ಪಡೆದಿದ್ದಾರೆ. ಸಂಗತ್ ಸಿಂಗ್ ಗಿಲ್ಜಿಯನ್ ಅರಣ್ಯ, ವನ್ಯ ಜೀವಿ, ಕಾರ್ಮಿಕ ಖಾತೆಗೆ ಬಂದಿದ್ದಾರೆ. ಗುರುಕೀರತ್ ಸಿಂಗ್ ಕೋಟ್ಲಿ ಅವರಿಗೆ ಕೈಗಾರಿಕೆ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಸಿಕ್ಕಿದೆ.