ಮಂಗಳೂರು: ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಪ ಬಂದ ಕೂಡಲೆ ರಾಜೀನಾಮೆ ಕೊಡುವುದು ಅಸಾಧ್ಯ. ಪ್ರಕರಣದ ಬಗ್ಗೆ ಪ್ರಾಮಾಣಿಕ ತನಿಖೆ ಆಗಲಿದೆ ಎಂದು ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ವಿರುದ್ಧ ಆರೋಪ ಮಾಡಿ ಉಡುಪಿ ವಸತಿಗೃಹ ಒಂದರಲ್ಲಿ ಸಂತೋಷ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾನೂನು ಬದ್ಧವಾಗಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ. ಈಶ್ವರಪ್ಪನವರು ಆರೋಪದ ವಿರುದ್ಧ ಹಿಂದೆಯೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎಂದಿದ್ದಾರೆ.
ಉಡುಪಿ ಎಸ್ಪಿ ಸಹಿತ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಮಂಗಳೂರಿನಿಂದ ವಿಧಿ ವಿಜ್ಞಾನ ತಜ್ಞರ ತಂಡವನ್ನು ಕಳುಹಿಸಲಾಗಿದೆ. ಅದರ ತನಿಖಾ ವರದಿ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಹೇಳಿದರು.
ಸಚಿವ ಈಶ್ವರಪ್ಪ ಮತ್ತು ಸಿಎಂ ರಾಜೀನಾಮೆ ಕೊಡಬೇಕು ಎಂಬ ಮಾಜಿ ಸಿದ್ದರಾಮಯ್ಯ ಒತ್ತಾಯಕ್ಕೆ ನಗುವಿನ ಮೂಲಕ ಪ್ರತಿಕ್ರಿಯಿಸಿದ ಅವರು, ಅಂದು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಸಿದ್ದರಾಮಯ್ಯ ಕೊಟ್ಟಿದ್ರಾ? ತನಿಖೆಯಿಂದ ಸತ್ಯಾಂಶ ಹೊರಗೆ ಬರಲಿದೆ ಎಂದರು.
ಆರೋಪವನ್ನು ಈಶ್ವರಪ್ಪ ಅಲ್ಲಗಳೆದಿದ್ದರು. ಸಚಿವರು ಸಂತೋಷ್ ಮೇಲೆ ಹಾಗೂ ಚಾನೆಲ್ ಮೇಲೆ ಕೇಸು ದಾಖಲಿಸಿದ್ದರು. ಸದ್ಯ ಈಶ್ವರಪ್ಪ ಮೈಸೂರಿನಲ್ಲಿದ್ದಾರೆ. ಅವರ ಜತೆ ಮಾತನಾಡಿಲ್ಲ. ಅವರ ಮೇಲೆ ಕ್ರಮದ ಬಗ್ಗೆ ಸಚಿವರ ಸಭೆಯಲ್ಲಿ ಕೈಗೊಳ್ಳಬಹುದು ಎಂದು ಸಿಎಂ ಹೇಳಿದರು.