ದ.ಕ.ಜಿಲ್ಲೆಯ ವೆಂಟೆಡ್ ಡ್ಯಾಂಗಳಲ್ಲಿನ ದಿಮ್ಮಿಗಳ ತೆರವಿಗೆ ಸಿಎಂ ಬೊಮ್ಮಾಯಿ ಸೂಚನೆ

Prasthutha|

ಮಂಗಳೂರು: ಮಳೆ ಹಾನಿಯಿಂದ ನೊಂದವರನ್ನು ಸಂರಕ್ಷಿಸುವುದಲ್ಲದೆ ಅವರಿಗೆ ಕಾಳಜಿ ಕೇಂದ್ರದಲ್ಲಿ ಗುಣಮಟ್ಟದ ಅಹಾರ‌ ನೀಡಬೇಕು. ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಬರದೆ ಸಂಬಂಧಿಕರ ಮನೆಗೆ ಹೋದಲ್ಲಿ ಅವರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

- Advertisement -

ಅವರು ಶನಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಳೆಯಿಂದ ಹಾನಿಗೊಳಗಾದ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ  ಮಳೆಯಿಂದಾದ ಹಾನಿ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ಚರ್ಚಿಸಿದರು.

ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ದುರಸ್ತಿಗೆ ಲೊಕೋಪಯೋಗಿ ಇಲಾಖೆಗೆ 500 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 200 ಕೋಟಿ ರೂ. ಬಿಡುಗಡೆ ಮಾಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ ಸಂಪರ್ಕ ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪರ್ಕ‌ ಕಡಿತಗೊಂಡಲ್ಲಿ ಕೇಂದ್ರ ಸರ್ಕಾರದ ಎನ್.ಎಚ್.ಎ.ಐ ನತ್ತ ನೋಡದೆ ಕೂಡಲೆ ದುರಸ್ತಿಗೊಳಿಸಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

- Advertisement -

ಭೂಕುಸಿತ ಹೆಚ್ಚಿರುವ ಪ್ರದೇಶದಲ್ಲಿ ಜನರ ಮನವೊಲಿಸಿ ಅಲ್ಲಿಂದ ಅವರನ್ನು ಸ್ಥಳಾಂತರಿಸಬೇಕು. ನೆರೆ ಹಾವಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುತ್ತವೆ. ಕೂಡಲೆ‌ ವಿದ್ಯುತ್ ಲೈನ್, ಟ್ರಾನ್ಸ್ ಫಾರ್ಮರ್ ಮರು ಸ್ಥಾಪಿಸಬೇಕು ಎಂದರು.

ಬೆಳೆ ಹಾನಿ ಸೇರಿದಂತೆ ಪ್ರವಾಹ ಸಂತ್ರಸ್ತರಿಗೆ ಎಸ್.ಡಿ.ಆರ್.ಎಫ್./ ಎನ್.ಡಿ.ಆರ್.ಎಫ್ ರಂತೆ ಪರಿಹಾರ ನೀಡಬೇಕು. ಪರಿಹಾರ ನೀಡುವ ಮುನ್ನ ಕೂಲಂಕಷವಾಗಿ ಪರಿಶೀಲಿಸಿ ನೀಡಬೇಕು. ಅನುದಾನಕ್ಕೆ ಯಾವುದೇ ಕೊರತೆಯಿಲ್ಲ. ಅನುದಾನ ಬೇಕಿದ್ದರೆ ಪ್ರಸ್ತಾವನೆ ಕಳುಹಿಸಿ. ರಸ್ತೆ, ಸೇತುವೆ ಹೊಸದಾಗಿ ನಿರ್ಮಿಸಬೇಕಿದಲ್ಲಿ ಡಿ.ಸಿ. ಮೂಲಕ ಇಲಾಖೆಗಳು ಪ್ರಸ್ತಾವನೆ‌ ಸಲ್ಲಿಸಬೇಕು ಎಂದರು.

ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವೆಂಟೆಡ್ ಡ್ಯಾಂಗಳಲ್ಲಿ ಸೇರಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಿ, ಅದಕ್ಕೆ ಜೆಸಿಬಿಯನ್ನು ಬಳಸಿಕೊಳ್ಳಿ, ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದಾಗ ಈ ಸೂಚನೆ ನೀಡಲಾಗಿತ್ತು, ಅರಣ್ಯ ಇಲಾಖೆಯಿಂದ ಕ್ರಮವಹಿಸಲು ತಿಳಿಸಲಾಗಿತ್ತು, ಮಳೆ ಹಾಗೂ ಪ್ರವಾಹದಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು, ಜಿಲ್ಲೆಯಲ್ಲಿ ಮಳೆಯಾಗುತ್ತಿದೆ, ಆದರೆ ಅಷ್ಟು ಬಿರುಸಾಗಿಲ್ಲ, ಕಳೆದ 48 ಗಂಟೆಗಳಲ್ಲಿ  ಯಾವುದೇ ರೀತಿಯ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ, 11 ಮನೆಗಳು ಭಾಗಶಃ ಹಾನಿಯಾಗಿವೆ ಹಾಗೂ 5 ಮನೆಗಳು ಪೂರ್ತಿ ಹಾನಿಯಾಗಿವೆ, ಕೊಡಗಿನ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಗುಡ್ಡಗಳ ಕುಸಿತ ಹೆಚ್ಚಾಗುವ ಕಾರಣ ಮುನ್ನಚ್ಚರಿಕಾ ಕ್ರಮವಾಗಿ 49 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ, 60 ಜನರಿಗೆ ಡ್ರೈ ರೇಷನ್ ಕಿಟ್ ಗಳನ್ನು ವಿತರಿಸಲಾಗಿದೆ, ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳಲ್ಲಿ ತಲಾ 10 ಸಾವಿರ ರೂ.ಗಳ ಪರಿಹಾರ ನೀಡಲಾಗಿದೆ, ಮನೆ ಹಾನಿಯಾದ ಪ್ರಕರಣಗಳಲ್ಲಿ 48ಗಂಟೆಗಳಲ್ಲಿ 95,100ರೂ.ಗಳ ಪರಿಹಾರ ನೀಡಲಾಗಿದೆ, ಜಿಲ್ಲೆಯಲ್ಲಿರುವ ಎಲ್ಲಾ ವೆಂಟೆಡ್ ಡ್ಯಾಂಗಳಲ್ಲಿ ಅರಣ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಮರದ ದಿಮ್ಮಿಗಳನ್ನು ತೆರವುಗೊಳಿಸಲಾಗಿದೆ ಹಾಗೂ ಅವುಗಳನ್ನು ಅರಣ್ಯ ಇಲಾಖೆಯ ಟಿಂಬರ್ ಯಾಡ್೯ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಬಿ.ಎ. ಬಸವರಾಜ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಡಿಸಿಪಿ ಅನ್ಷು ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸೀತಾ ಹಾಗೂ ಸಂಬಂಧಿಸಿದ ಅಧಿಕಾರಿಗಳಿದ್ದರು.

Join Whatsapp