ಬೆಂಗಳೂರು: ವಿಧಾನಸೌಧದ ಮುಂಭಾಗ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
15ನೇ ಅಂತರಾಷ್ಟ್ರೀಯ ಸಿನಿಮಾ ಉತ್ಸವದ ರಾಯಭಾರಿ ಡಾಲಿ ಧನಂಜಯ್, ಹ್ಯಾ ಟ್ರಿಕ್ ಹೀರೋ ಶಿವರಾಜ್ ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸಾಧು ಕೋಕಿಲ, ಆರಾಧನಾ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚಿತ್ರೋತ್ಸವದ ರಾಯಭಾರಿ ಡಾಲಿ ಧನಂಜಯ ಮಾತನಾಡಿ, ಚಿತ್ರೋದ್ಯಮದ ಪರವಾಗಿ ಒಂದಿಷ್ಟು ಬೇಡಿಕೆಗಳನ್ನು ಸಿಎಂ ಮುಂದಿಟ್ಟರು. ‘ಕೊರೊನಾ ಬಳಿಕ ಸಿನಿಮಾ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ರಾಜ್ಯದ ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುತ್ತಿರುವ ಪ್ರಶಸ್ತಿಗಳು ಕೂಡ ನಿಂತಿದೆ. ಕಲಾವಿದರಿಗೆ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ‘ಕಾಂತರ’, ‘ಕೆಜಿಎಫ್’ ಅಂತಹ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಗುರುತಿಸುವಂತೆ ಮಾಡಿದೆ. ಇದರ ಜೊತೆಗೆ ಸರ್ಕಾರದ ಪ್ರೋತ್ಸಾಹ ಕೂಡ ತುಂಬಾ ಮುಖ್ಯ. ಸದ್ಯ ನಿಂತಿರುವ ಪ್ರಶಸ್ತಿ ಮತ್ತು ಸಬ್ಸಿಡಿಯನ್ನು ಮುಂದುವರಿಸಬೇಕೆಂದು ಚಿತ್ರರಂಗದ ಪರವಾಗಿ ನಾನು ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ’ ಎಂದರು.
ಧನಂಜಯ್ ಮಾತುಗಳಿಗೆ ಸಿಎಂ ಸಿದ್ದರಾಮಯ್ಯ ಸ್ಥಳದಲ್ಲಿಯೇ ಸಮ್ಮತಿ ಸೂಚಿಸಿದರು. ಚಿತ್ರೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಚಿತ್ರೋತ್ಸವಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ನೀಡಿದೆ, ಮುಂದೆಯೂ ಸಹ ಚಿತ್ರರಂಗಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದೆ. ಕನ್ನಡ ಚಿತ್ರರಂಗಕ್ಕೆ ಎಲ್ಲಾ ರೀತಿಯ ಬೆಂಬಲ, ಹಣಕಾಸಿನ ಸಹಕಾರವನ್ನು ಕೊಡುತ್ತೇವೆ. 2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ಈಗ ನಾನು ಸಮಿತಿಗಳನ್ನು ಮಾಡಿದ್ದೇನೆ. ಆ ಸಮಿತಿಗಳು ವರದಿ ಕೊಟ್ಟ ತಕ್ಷಣ ಎಲ್ಲಾ ವರ್ಷದ ಪ್ರಶಸ್ತಿಗಳನ್ನು ಕೊಡುತ್ತೇವೆ’ ಎಂದರು.