ಮದರಸಾಗಳನ್ನು ಮುಚ್ಚಿದರೆ ಭಾರತೀಯ ಮುಸ್ಲಿಮರಿಗೆ ಅನುಕೂಲವೇ ಹೆಚ್ಚು ಎಂದ ಅಸ್ಸಾಂ ಸಿಎಂ

Prasthutha|

ಗುವಾಹತಿ: ಮದರಸಾಗಳನ್ನು ಮುಚ್ಚಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗಳಿಸಲು ಯಾರೇ ಪ್ರಯತ್ನಿಸಿದರೂ ಅದರಿಂದ ಭಾರತೀಯ ಮುಸ್ಲಿಮರಿಗೆ ಅನುಕೂಲವೇ ಹೆಚ್ಚು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಆರ್ ಎಸ್ ಎಸ್ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಗಳ 75ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಳಸುತ್ತಿರುವ ಭಾಷೆ ಮತ್ತು ಹೇಳುತ್ತಿರುವ ವಿಧಾನ ಬೇರೆ ಇರಬಹುದು. ಆದರೆ ರಾಹುಲ್ ಗಾಂಧಿ ಅವರ ಹೇಳಿಕೆಗಳು ಒಂದೇ ಭಾವನೆ ಹೊಂದಿವೆ ಎಂದು ದೂರಿದರು. ಇಂಥ ಹೇಳಿಕೆಗಳಿಗಾಗಿ ನಾನು ರಾಹುಲ್ ಗಾಂಧಿ ಅವರನ್ನು ದೂರುವುದಿಲ್ಲ. ಅವರು ಜೆಎನ್ ಯು ವಿದ್ವಾಂಸರಿಂದ ಪಾಠ ಕೇಳಿರಬಹುದು ಎಂದು ವ್ಯಂಗ್ಯವಾಡಿದರು. ಕಳೆದ ಶನಿವಾರ ಲಂಡನ್ ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಭಾರತವು ಸಂವಿಧಾನದಲ್ಲಿ ವಿವರಿಸುವಂತೆ ರಾಜ್ಯಗಳ ಒಕ್ಕೂಟವೇ ಆಗಿದೆ’ ಎಂದು ಹೇಳಿದ್ದರು.
ನಾನು ಕಾಂಗ್ರೆಸ್ ನಲ್ಲಿ 22 ವರ್ಷ ಕಾಲ ಇದ್ದೆ. ಗಾಂಧಿ ಕುಟುಂಬಕ್ಕೆ ಮೋಸ ಮಾಡುವುದನ್ನು ಅಲ್ಲಿ ದೇಶದ್ರೋಹ ಎಂದು ಭಾವಿಸುತ್ತಾರೆ. ಆದರೆ ಬಿಜೆಪಿಯಲ್ಲಿ ಹಾಗಲ್ಲ. ಇಲ್ಲಿರುವವರಿಗೆ ಪಕ್ಷಕ್ಕಿಂತ ದೇಶವೇ ಮುಖ್ಯ ಎಂದು ಹೇಳಿದರು. ಅಸ್ಸಾಂನಲ್ಲಿರುವ ಸರ್ಕಾರಿ ಅನುದಾನಿತ ಮದರಸಾಗಳ ಬಾಗಿಲು ಹಾಕಿಸುವುದಾಗಿ ಹೇಳಿದ ಅವರು, ಭಾರತೀಯ ಮುಸ್ಲಿಮರು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರಿಯಬೇಕು ಎಂದಾದರೆ ಮದರಸಾ ಎಂಬ ಪದವೂ ಇತಿಹಾಸದ ಪುಟ ಸೇರಬೇಕು. ಧಾರ್ಮಿಕ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು ಎಂದಿದ್ದರೆ, ಮನೆಗಳಲ್ಲಿ ಹೇಳಿಕೊಡಿ. ಆದರೆ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಕಲಿಸಬೇಕು ಎಂದು ಹೇಳಿದರು.
‘ಮದರಸಾಗಳ ಬಾಗಿಲು ಹಾಕುವುದು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದರಿಂದ ಮುಸ್ಲಿಮರಿಗೆ ಹೆಚ್ಚು ಅನುಕೂಲ’ ಎಂದು ಎಐಎಂಐಎಂ ನಾಯಕ ಅಸದುದ್ದಿನ್ ಉವೈಸಿ ಅವರನ್ನು ಗುರಿಯಾಗಿಸಿ ಹೇಳಿದ್ದರು. ಇದನ್ನು ನಾವು ಹಿಂದುತ್ವಕ್ಕಾಗಿ ಮಾಡಬೇಕಿಲ್ಲ. ಇಂಥ ಕೆಲಸವನ್ನು ಯಾರೇ ಮಾಡಿದರೂ ಅವರನ್ನು ಮುಸ್ಲಿಮರು ತಮ್ಮ ಗೆಳೆಯರು ಎಂದು ಭಾವಿಸಬೇಕು’ ಎಂದು ಹೇಳಿದರು.
ಅಸ್ಸಾಂನಲ್ಲಿರುವ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮರ ಸಂಖ್ಯೆ ಶೇ 36ರಷ್ಟು ಇದೆ. ಇವರನ್ನು ಹಿಮವಂತ ಬಿಸ್ವಾ ಶರ್ಮಾ ಮೂರು ರೀತಿ ವಿಂಗಡಿಸಿದರು. ಮೊದಲನೆಯದು, ಅಸ್ಸಾಂ ಮೂಲ ನಿವಾಸಿಗಳಾದ ಮುಸ್ಲಿಮರು. ಎರಡನೆಯದು, ಇಂದಿಗೂ ಮನೆಗಳ ಎದುರು ತುಳಸಿ ಗಿಡ ಇರಿಸುವ ಮುಸ್ಲಿಮರು, ಮೂರನೆಯದು 1971ನೇ ಯುದ್ಧದ ಸಂದರ್ಭದಲ್ಲಿ ಅಸ್ಸಾಂಗೆ ಬಂದವರು. ಮೂರನೇ ವರ್ಗದವರನ್ನು ಮಿಯಾ ಮುಸ್ಲಿಮರು ಎಂದು ಅವರು ಲೇವಡಿ ಮಾಡಿದರು.

Join Whatsapp