ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದು ಸರಕಾರ ಮುಂದುವರೆಸಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೆಹಲೋತ್, ಚುನಾವಣಾ ಪ್ರಚಾರ ವೇಳೆ ಬಿಜೆಪಿ ನಾಯಕರು ಅತ್ಯಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರು. ಮತೀಯವಾಗಿ ಜನರನ್ನು ವಿಂಗಡಿಸಿದರು. ಧರ್ಮವನ್ನು ಎಳೆತಂದರು ಆದರೆ, ರಾಜ್ಯದ ಜನರು ಅವರನ್ನು ತಿರಸ್ಕರಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರುದ್ಧ ಜನರನ್ನು ಕೆರಳಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರು. ಆದರೆ ರಾಜ್ಯದ ಜನರು ಅವುಗಳನ್ನು ಸ್ವೀಕರಿಸಲಿಲ್ಲ. ಕಾಂಗ್ರೆಸ್ ಸರಕಾರದಲ್ಲಿ ಆಡಳಿತ ವಿರೋಧಿ ಯಾವ ಅಂಶಗಳೂ ಇರಲಿಲ್ಲ ಎಂದು ಗೆಹಲೋತ್ ತಿಳಿಸಿದರು.
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ. ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.