ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಣೆ ಕಳವಳಕಾರಿ: ಡಾ. ಮುಹಮ್ಮದ್ ಸಾದ್ ಬೆಳಗಾಮಿ

Prasthutha|

ಬೆಂಗಳೂರು: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಿಸಿರುವುದು ಖಂಡನೀಯ. ಹಿಜಾಬ್ ಎಂಬುವುದು ಮುಸ್ಲಿಮರು ಮತ್ತು ವಿವಿಧ ಸಮುದಾಯಗಳು ಬೇರೆ ಬೇರೆ ಹೆಸರುಗಳಲ್ಲಿ ಆಚರಣೆ ಮಾಡುವ ಒಂದು ಹಳೆಯ ಉಡುಗೆಯಾಗಿದೆ. ಮಹಿಳೆಯರ ಅಸ್ಮಿತೆ ಮತ್ತು ಪ್ರಗತಿಗೆ ಇದು ಎಂದಿಗೂ ಅಡ್ಡಿಯಾಗಿರಲಿಲ್ಲ. ಉಡುಪಿಯಲ್ಲಿ ವಿದ್ಯಾರ್ಥಿನಿಯರಿಗೆ ಅದನ್ನೇ ನಿರಾಕರಿಸಿ, ಅವರ ಘನತೆ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವುದು ಅತ್ಯಂತ ಖೇದನೀಯ ಮತ್ತು ಕಳವಳಕಾರಿ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 31 ಡಿಸೆಂಬರ್ 2021ರಂದು ತರಗತಿಗಳಿಗೆ ಹಾಜರಾಗುವಾಗ ಹಿಜಾಬ್ ಧರಿಸದಂತೆ ಉಡುಪಿಯ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಾಲೇಜಿನ ಮುಖ್ಯಸ್ಥರು ಸೂಚಿಸಿದ್ದಾರೆ. ಇದು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಮ್ಯಾನೇಜ್ ಮೆಂಟ್ ನಡುವೆ ಅಸಮಾಧಾನ ಮತ್ತು ಸಂಘರ್ಷಕ್ಕೆ ಕಾರಣವಾಯಿತು. ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿನಿಯರನ್ನು ತರಗತಿಗಳಿಂದ ಹೊರಗಿಡಲಾಗುತ್ತಿದೆ. 2016 ರಲ್ಲಿ ಕೇರಳ ಹೈಕೋರ್ಟ್ ಒಂದು ಮಹತ್ವದ ಪ್ರಕರಣದಲ್ಲಿ ಈ ಹಕ್ಕನ್ನು ಎತ್ತಿಹಿಡಿದಿದೆ ಎಂಬುದನ್ನು ಗಮನಿಸಬೇಕು ಎಂದರು.

ಸಂಬಂಧಪಟ್ಟ ಅಧಿಕಾರಿಗಳು, ಸರಕಾರ ಮತ್ತು ಶಿಕ್ಷಣ ಸಚಿವರು ಈ ಪ್ರಕರಣವನ್ನು ಅಶಿಸ್ತಿನ ವಿಷಯವಾಗಿ ನೋಡದೆ ಮೂಲಭೂತ ಹಕ್ಕು ಮತ್ತು ನಮ್ಮ ಸಮಾಜದ ವೈವಿಧ್ಯತೆಯನ್ನು ಗೌರವಿಸಬೇಕು. ವಿದ್ಯಾರ್ಥಿನಿಯರು ಬಯಸಿದಲ್ಲಿ ಹಿಜಾಬ್ ಧರಿಸಲು ಮತ್ತು ತರಗತಿಗಳಿಗೆ ಅವರ ಹಾಜರಾತಿಯನ್ನು ತಕ್ಷಣವೇ ಪುನರಾರಂಭಿಸಲು ಅನುಮತಿಸಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸಬಾರದು ಮತ್ತು ವಿಷಯವು ಸಮುದಾಯಗಳ ನಡುವೆ ಧ್ರುವೀಕರಣ ಮತ್ತು ದ್ವೇಷಕ್ಕೆ ಕಾರಣವಾಗಬಾರದು. ಉಡುಪಿ ನಗರದ ಮುಸ್ಲಿಂ ಒಕ್ಕೂಟ ಮತ್ತು ಸಮಾಜದ ಇತರ ಹಿರಿಯರ ಪ್ರಯತ್ನಗಳು ಸಮಸ್ಯೆಯ ಸೌಹಾರ್ದಯುತ ಪರಿಹಾರಕ್ಕೆ ಕಾರಣವಾಗಬೇಕು ಎಂದು ಹೇಳಿದರು.

- Advertisement -

73ನೇ ಗಣರಾಜ್ಯೋತ್ಸವದ ಅಂಗವಾಗಿ ಸಂಗೀತ ವಾದ್ಯದೊಂದಿಗೆ ಸೂರ್ಯ ನಮಸ್ಕಾರ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. 3 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಮೂಲಕ 30 ರಾಜ್ಯಗಳು, 30000 ಸಂಸ್ಥೆಗಳಲ್ಲಿ 75 ಕೋಟಿ ಸೂರ್ಯ ನಮಸ್ಕಾರದ ಗುರಿಯನ್ನು ಸಾಧಿಸುವುದು ಯೋಜನೆಯಾಗಿದೆ. ಸೂರ್ಯ ನಮಸ್ಕಾರವು ಸೂರ್ಯನಿಗೆ ಸಾಷ್ಟಾಂಗ ನಮಸ್ಕಾರ ಮತ್ತು ಸ್ತೋತ್ರಗಳ ಪಠಣವನ್ನು ಒಳಗೊಂಡ ಭಕ್ತಿಪೂರ್ವಕ ಯೋಗಾಭ್ಯಾಸ ಎಂದು ನಾವು ಹೇಳಲು ಬಯಸುತ್ತೇವೆ. ಇಸ್ಲಾಂ ಧರ್ಮವು ಇಂತಹ ಯಾವುದೇ ಸೃಷ್ಟಿ ಆರಾಧನೆ ಅಥವಾ ಯಾವುದೇ ಸೃಷ್ಟಿಗೆ ಭಕ್ತಿಯನ್ನು ಸಮರ್ಪಿಸುವುದನ್ನು ಬಲವಾಗಿ ನಿಷೇಧಿಸುತ್ತದೆ ಮತ್ತು ಸಂಪೂರ್ಣ ವಿಶ್ವದ ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾತ್ರ ಆರಾಧನೆಯನ್ನು ಸಲ್ಲಿಸಲು ಕಟ್ಟುನಿಟ್ಟಾಗಿ ಆದೇಶಿಸುತ್ತದೆ. ಹಾಗಾಗಿ ಈ ವಿಷಯದಲ್ಲಿ ಪಾಲ್ಗೊಳ್ಳುವಂತೆ ನಿರೀಕ್ಷಿಸುವುದು ಅಥವಾ ಕೇಳುವುದು ಮುಸ್ಲಿಂ ಮಕ್ಕಳ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಸರ್ಕಾರವು ಒಂದು ಸಮುದಾಯದ ಧಾರ್ಮಿಕ ಆಚರಣೆಗಳನ್ನು ಇತರರ ಮೇಲೆ ಜಾರಿಗೊಳಿಸಬಾರದು. ಏಕೆಂದರೆ ಇದು ಜಾತ್ಯತೀತ ತತ್ವಗಳ ಉಲ್ಲಂಘನೆ ಮತ್ತು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮನೋಭಾವಕ್ಕೆ ವಿರುದ್ಧವಾಗಿದೆ. ಇಂತಹ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಮುಸ್ಲಿಂ ಪೋಷಕರು ಮತ್ತು ಮಕ್ಕಳಿಗೆ ನಾವು ಸಲಹೆ ನೀಡುತ್ತೇವೆ. ದೇವರ ಏಕತೆಯ ಪರಿಕಲ್ಪನೆ ಮತ್ತು ಅದರ ಬೇಡಿಕೆಗಳನ್ನು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಇದು ಒಂದು ಸಂದರ್ಭವಾಗಬೇಕು. ಈ ವೈವಿಧ್ಯತೆ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವಂತೆ ಶಾಲೆಗಳು ಮತ್ತು ಸಂಸ್ಥೆಗಳ ಆಡಳಿತವನ್ನು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.

ನರಗುಂದದಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಹಾಗೂ ಪ್ರಚೋದನಾತ್ಮಕ ಘಟನೆಗಳು ಮುಸ್ಲಿಂ ಯುವಕನ ಸಾವು ಮತ್ತು ಮತ್ತೊಬ್ಬನಿಗೆ ಗಂಭೀರ ಗಾಯಗಳಿಗೆ ಕಾರಣವಾಗಿರುವುದು ಅತ್ಯಂತ ಖಂಡನೀಯ. ಕಳೆದ ಕೆಲವು ವಾರಗಳಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಮೊದಲೇ ನಿಯಂತ್ರಿಸಬೇಕಿತ್ತು. ಕಳೆದೆರಡು ತಿಂಗಳುಗಳಿಂದ ಕ್ರೈಸ್ತರ ಆರಾಧನಾ ಸ್ಥಳಗಳ ಮೇಲೆ ದಾಳಿ, ನೈತಿಕ ಪೊಲೀಸ್ ಗಿರಿ ಮತ್ತು ಗೂಢಚರ್ಯೆ, ಮಸೀದಿಗಳ ಬಗ್ಗೆ ಆಧಾರರಹಿತ ವಿವಾದಗಳು ಮತ್ತು ಆರೋಪಗಳನ್ನು ಎತ್ತುವುದು ಇತ್ಯಾದಿಗಳ ರೂಪದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇಂತಹ ಕೋಮುಶಕ್ತಿಗಳ ಮನುಷ್ಯ ವಿರೋಧಿ ಕೃತ್ಯಗಳು ಪುನಾರಾವರ್ತನೆಯಾಗದಂತೆ ನಾವು ರಾಜ್ಯ ಸರಕಾರ ಹಾಗೂ ಪೋಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ. ನಮ್ಮ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ರಾಜಕೀಯಗೊಳಿಸುವುದು ಮತ್ತು ಕದಡುವುದನ್ನು ಜನರು ಒಕ್ಕೊರಲಿನಿಂದ ವಿರೋಧಿಸಬೇಕು.

ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯು ಕೂಡ ವಾತಾವರಣವನ್ನು ಹಾಳುಮಾಡಿದೆ ಮತ್ತು ಸರಕಾರ ಅದನ್ನು ಪುನರ್ ಪರಿಶೀಲಿಸಬೇಕಾಗಿದೆ ಹಾಗೂ ಆ ಪ್ರಕ್ರಿಯೆಯನ್ನು ಮುಂದುವರಿಸಬಾರದಾಗಿ ಒತ್ತಾಯಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಯೂಸುಫ್ ಕನ್ನಿ, ಮೌಲಾನಾ ವಹೀದುದ್ದೀನ್ ಖಾನ್ ಉಮರಿ, ಅಕ್ಬರ್ ಅಲಿ ಉಡುಪಿ, ನವಾಝ್ ಉಪಸ್ಥಿತರಿದ್ದರು.



Join Whatsapp