ಬೆಂಗಳೂರು: ಭ್ರೂಣಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಯ ಪ್ರಕರಣವನ್ನು ಬೆಂಗಳೂರಿನ ಪೊಲೀಸರು ಭೇದಿಸಿದ್ದು, ರಾಜ್ಯದ ನಾನಾ ಕಡೆಗಳಲ್ಲಿ ಭ್ರೂಣ ಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಿಗೆ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.
ದೇಶದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಿಷೇಧ ನಿಯಮ ಜಾರಿಯಲ್ಲಿದ್ದರೂ ಕೂಡ ನೂರಾರು ಹೆಣ್ಣು ಭ್ರೂಣಗಳ ಹತ್ಯೆ ಕಳೆದ ಕೆಲವು ವರ್ಷಗಳಿಂದಲೂ ನಡೆದಿವೆ. ಇಂತಿಷ್ಟು ಹಣ ಪಡೆದು ದಂಧೆ ನಡೆಸುತ್ತಿದ್ದು, ಈ ದಂಧೆಯನ್ನು ನಗರದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಈವರೆಗೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಕಳೆದ ಮೂರು ವರ್ಷಗಳಲ್ಲಿ ಒಟ್ಟು 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾಗಿ ತನಿಖೆಯಿಂದ ಬಯಲಾಗಿದೆ.
ಭ್ರೂಣಹತ್ಯೆ ಪ್ರಕರಣ ದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಲೋಪ ಕಾಣುತ್ತಿದ್ದು, ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಇಲ್ಲಿ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚಿಸಿರುವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೆಣ್ಣು ಹತ್ಯೆ ಪ್ರಕರಣ ಗಂಭೀರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಚರ್ಚಿಸಿ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸೂಚಿಸಿದ್ದಾರೆ.