ಭಾಷೆ ವಿಚಾರಕ್ಕೇ ಚಂದ್ರು ಕೊಲೆ ಎಂದು ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ !

Prasthutha|

ಬೆಂಗಳೂರು: ಜೆಜೆ ನಗರದ ಹಳೆಗುಡ್ಡದಹಳ್ಳಿಯಲ್ಲಿ ಕಳೆದ ಮಾ.4ರ ರಾತ್ರಿ ಯುವಕ ಚಂದ್ರು ಕೊಲೆಯಾಗಿರುವುದು ಭಾಷೆ ವಿಚಾರಕ್ಕೆ ಅಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದರೂ ಸಿಐಡಿ ಅಧಿಕಾರಿಗಳು ಚಂದ್ರು ಕೊಲೆಗೆ ಭಾಷೆ ವಿಷಯವೇ ಕಾರಣ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೀಗ ಪೊಲೀಸರ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

- Advertisement -

ಪ್ರಕರಣದ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 179 ಪುಟಗಳ ಆರೋಪಪಟ್ಟಿಯಲ್ಲಿ ಕೊಲೆಗೆ ಕಾರಣ ಏನೆಂಬುದು ವಿವರಿಸಿದ್ದಾರೆ.

ಭಾಷೆ ವಿಚಾರಕ್ಕೇ ಚಂದ್ರು ಕೊಲೆ ನಡೆದಿದೆ ಎಂದು ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಬೈಕ್ ಅಪಘಾತ ಕಾರಣವಲ್ಲ, ಉರ್ದು ಭಾಷೆಯಲ್ಲಿ ಮಾತಾಡಲಿಲ್ಲ ಎನ್ನುವುದು ಚಂದ್ರು ಕೊಲೆಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಕಾಟನ್ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು (22)ನನ್ನು ಮಾ.4ರ ತಡರಾತ್ರಿ ಕೊಲೆ ಮಾಡಲಾಗಿತ್ತು. ಆರೋಪಿ ಶಾಹಿದ್ ಸೇರಿ ಹಲವರನ್ನು ಜೆ.ಜೆ. ನಗರ ಪೊಲೀಸರು ಬಂಧಿಸಿದ್ದರು. ಗೂಡ್ಸ್ ಶೆಡ್ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಚಂದ್ರು ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್ ಹುಟ್ಟುಹಬ್ಬ ಆಚರಿಸಲು ಮಾ.4ರ ರಾತ್ರಿ ಆತನ ಮನೆಗೆ ಹೋಗಿದ್ದ. ಆ ವೇಳೆ ಚಿಕನ್ ರೋಲ್ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್ ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್ ಮುಂದಿನಿಂದ ಬರುತ್ತಿದ್ದ ಶಾಹಿದ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ.

ಈ ವೇಳೆ ಸರಿಯಾಗಿ ಬೈಕ್ ಚಲಾಯಿಸುವಂತೆ ಶಾಹಿದ್ ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ.

ಬೈಕ್ ಡಿಕ್ಕಿಯಾಗಿದ್ದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಗಲಾಟೆ ವೇಳೆ ಉರ್ದು ಭಾಷೆಯಲ್ಲಿ ಮಾತಾಡುವಂತೆ ಶಾಹಿದ್ ತಂಡ ಹೇಳಿದೆ. ಈ ವೇಳೆ ಉರ್ದು ಬರಲ್ಲ ಎಂದು ಕನ್ನಡದಲ್ಲೇ ಮಾತನಾಡಿದ ಚಂದ್ರುವನ್ನು ಚುಚ್ಚಿ ಕೊಲ್ಲಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದರು. ಈ ಪ್ರಕರಣ ವಿವಾದದ ಸ್ವರೂಪ ಪಡೆದಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ಗೃಹ ಸಚಿವರು ಹಿಂಪಡೆದಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಇದೀಗ ಚಾರ್ಜ್ಶೀಟ್ ಸಲ್ಲಿಸಿದ್ದು, ಚಂದ್ರು ಸಾವಿಗೆ ಕಾರಣ ಏನೆಂದು ತಿಳಿಸಿದ್ದಾರೆ.



Join Whatsapp