ಸರಕಾರಿ ಅಧಿಕಾರಿಗಳ ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿದ ಸಿಐಡಿ

Prasthutha|

ಬೆಂಗಳೂರು: ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯ ವ್ಯಕ್ತಿಗಳ ಪ್ರೊಫೈಲ್ ಗಳನ್ನು ರಚಿಸಿ ಮೋಸ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಕರ್ನಾಟಕ ಅಪರಾಧ ತನಿಖಾ ದಳ (ಸಿಐಡಿ), ಐದು ಮಂದಿಯನ್ನು ಬಂಧಿಸಿದೆ.

ದುಷ್ಕರ್ಮಿಗಳು ಆಧಾರ ಕಾರ್ಡುಗಳನ್ನು ದುರ್ಬಳಕೆ ಮಾಡುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಐಡಿ ಹೇಳಿದೆ. ಹೊಸ ಸಂಪರ್ಕಗಳನ್ನು ನೀಡುವ ವಿಷಯದಲ್ಲಿ ಮೊಬೈಲ್ ಸೇವಾ ಪೂರೈಕೆದಾರರು ಅನುಸರಿಸುವ ದೃಢೀಕರಣ ಪ್ರಕ್ರಿಯೆಯಲ್ಲಿ ಗಂಭೀರ ನ್ಯೂನತೆಗಳಿರುವುದು ಕಂಡುಬಂದಿದೆ.

- Advertisement -

ನಕಲಿ ಆಧಾರ್ ಕಾರ್ಡುಗಳನ್ನು ಬಳಸಿ ದೂರವಾಣಿ ಸಂಖ್ಯೆಗಳನ್ನು ನೀಡಿ ನಕಲಿ ಅಕೌಂಟ್ ಗಳು ಮತ್ತು ನಕಲಿ ಇ ವಾಲೆಟ್ ಗಳನ್ನು ರಚಿಸುವುದು ಗ್ಯಾಂಗ್ ನ ಕಾರ್ಯಾಚರಣೆಯ ವಿಧಾನವಾಗಿತ್ತು.

“ನಕಲಿ ಪ್ರೊಫೈಲ್ ಗಳನ್ನು ರಚಿಸಿದ ಬಳಿಕ ಗ್ಯಾಂಗ್ ಸದಸ್ಯರಲ್ಲೊಬ್ಬ ಫ್ರೆಂಡ್ ರಿಕ್ವಸ್ಟ್ ಗಳನ್ನು ಕಳುಹಿಸುತ್ತಿದ್ದ ಮತ್ತು ತಾವು ರಚಿಸಿದ ನಕಲಿ ಇ ವಾಲೆಟ್ ಅಕೌಂಟ್ ಗಳಿಗೆ ತುರ್ತು ಹಣವನ್ನು ವರ್ಗಾಯಿಸುವಂತೆ ಕೇಳುತ್ತಿದ್ದರು. ಹಣವನ್ನು ಪಡೆದ ಬಳಿಕ ಇಂತಹ ಅಕೌಂಟ್ ಗಳನ್ನು ಅವರು ಮುಚ್ಚುತ್ತಿದ್ದರು. ಇದು ದೇಶಾದ್ಯಂತ ಇರುವ ದಂಧೆಯಂತೆ ತೋರುತ್ತದೆ” ಎಂದು ಪೊಲೀಸ್ ಅಧಿಕಾರಿ ವರದಿಗಾರರಿಗೆ ತಿಳಿಸಿದ್ದಾರೆ.

ಬಂಧಿತರಲ್ಲಿ ನಾಲ್ವರನ್ನು ರಾಜಸ್ಥಾನದ ಭರತ್ ಪುರದ ಅನ್ಸಾರ್, ಬಲವಿಂದರ್ ಸಿಂಗ್, ಸೈನಿ, ಸದ್ದಾಂ ಎಂದು ಗುರುತಿಸಲಾಗಿದೆ. ಫೇಸ್ಬುಕ್ ನಕಲಿ ಅಕೌಂಟ್ ಗಳನ್ನು ರಚಿಸುತ್ತಿದ್ದ ಪ್ರಮುಖ ಆರೋಪಿ ಶಕೀಲ್ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕದ ಇತರ ಸರಕಾರಿ ಅಧಿಕಾರಿಗಳ ಆಧಾರ್ ಕಾರ್ಡ್ ಬಳಸಿ ನಕಲಿ ಪ್ರೊಫೈಲ್ ಗಳನ್ನು ರಚಿಸುತ್ತಿದ್ದರು. ಹೀಗೆ ನಕಲಿ ಅಕೌಂಟ್ ರಚಿಸಲ್ಪಟ್ಟವರಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಪಿ.ಹರಿಶೇಖರನ್ ಓರ್ವರು.

- Advertisement -