ಕ್ರಿಶ್ಚಿಯನ್‌ ಕಾರ್ಪೊರೇಷನ್‌ಗೆ ಶೀಘ್ರ ಅಧ್ಯಕ್ಷ, ನಿರ್ದೇಶಕರ ನೇಮಕ: ಐವನ್ ಡಿಸೋಜ

Prasthutha|

ಬೀದರ್: ಕರ್ನಾಟಕ ಕ್ರಿಶ್ಚಿಯನ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ ನೋಂದಣಿ ಆಗಿದ್ದು, ರಾಜ್ಯ ಸರ್ಕಾರದಿಂದ ಕೆಲವೇ ದಿನಗಳಲ್ಲಿ ನೂತನ ಅಧ್ಯಕ್ಷ, ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.

- Advertisement -

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಾರ್ಪೊರೇಷನ್‌ಗೆ ₹200 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ₹80 ಕೋಟಿ ಬಿಡುಗಡೆಗೊಳಿಸಲಾಗಿದೆ. ಕಾರ್ಪೊರೇಷನ್‌ ಅಸ್ತಿತ್ವಕ್ಕೆ ಬಂದ ನಂತರ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ವಿದೇಶದಲ್ಲಿ ಅಧ್ಯಯನಕ್ಕಾಗಿ ಸಾಲ, ಸಮುದಾಯ ಆಧಾರಿತ ತರಬೇತಿಗೆ ಅನುದಾನ ನೀಡಲಾಗುವುದು ಎಂದು ನಗರದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳು ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ಸೇರಿದರೆ ಅವರ ಸಂಪೂರ್ಣ ಶುಲ್ಕವನ್ನು ಭರಿಸಲಾಗುವುದು. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೋ ಅವರಿಗೆ ಪ್ರಯೋಜನ ಸಿಗಲಿದೆ. ಹಣವಿಲ್ಲದೇ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದನ್ನು ತಡೆಯುವುದು ಸರ್ಕಾರದ ಉದ್ದೇಶ ಎಂದು ವಿವರಿಸಿದರು.



Join Whatsapp