ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಇಬ್ಬರು ಮಾಜಿ ಆಟಗಾರರರಿಗೆ ‘ಹಾಲ್ ಆಫ್ ಫೇಮ್’ ಪ್ರಶಸ್ತಿಯನ್ನು ಘೋಷಿಸಿದೆ.
ಆರ್ ಸಿಬಿಯ ತಂಡದ ಅವಿಭಾಜ್ಯ ಅಂಗವೇ ಆಗಿದ್ದ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಮತ್ತು ಮಿ. 360 ಬ್ಯಾಟರ್ ಖ್ಯಾತಿಯ ಎಬಿ ಡಿ ವಿಲಿಯರ್ಸ್, ಚೊಚ್ಚಲ ‘ಹಾಲ್ ಆಫ್ ಫೇಮ್’ ಗೌರವಕ್ಕೆ ಭಾಜನರಾಗಿದ್ದಾರೆ. ಐಪಿಎಲ್ ಟೂರ್ನಿಯು ಅತ್ಯಂತ ಜನಪ್ರಿಯವಾಗಲು ಇವರಿಬ್ಬರ ಕೊಡುಗೆ ಅಪಾರ ಎಂಬುದು ನಿರ್ವಿವಾದ. ಈ ಕಾರಣದಿಂದಾಗಿಯೇ ಉಭಯ ಆಟಗಾರರು ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮುಂದಿನ ವರ್ಷ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಇಬ್ಬರು ದಿಗ್ಗಜರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ವಿರಾಟ್ ಕೊಹ್ಲಿ ಸೇರಿದಂತೆ ಆರ್ ಸಿಬಿ ತಂಡದ ಆಟಗಾರರು ಭಾಗವಹಿಸಿದ್ದ ವರ್ಚ್ಯುವಲ್ ಕಾನ್ಫರೆನ್ಸ್ ನಲ್ಲಿ ಎಬಿಡಿ ಹಾಗೂ ಗೇಲ್ ಎಲ್ಲರ ಜೊತೆ ಮಾತುಕತೆ ನಡೆಸಿದರು. ʻಆರ್ ಸಿಬಿ ತಂಡ ಯಾವಾಗಲೂ ನನಗೆ ಫೇವರೆಟ್, ಅದು ನನ್ನ ಹೃದಯದಲ್ಲಿರುತ್ತದೆʼ ಎಂದ ಗೇಲ್, ಟೂರ್ನಿಯ ಉಳಿದ ಪಂದ್ಯಗಳಿಗೆ ತಂಡಕ್ಕೆ ಶುಭ ಹಾರೈಸಿದರು.
ʻಕ್ರಿಕೆಟ್ ನಿಂದ ಸ್ವಲ್ಪ ದೂರ ಉಳಿದಿದ್ದೇನೆʼ ಎಂದು ಮಾತು ಆರಂಭಿಸಿದ ಎಬಿಡಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಭಾವನಾತ್ಮಕ ನಿಮಿಷವಾಗಿದೆ. ಒಳ್ಳೆಯ ಮಾತುಗಳಿಗಾಗಿ ವಿರಾಟ್ ಮತ್ತು ಈ ಗೌರವ ನೀಡಿದ ಫ್ರಾಂಚೈಸಿಗೆ ಧನ್ಯವಾದಗಳು, ಇದು ನಿಜವಾಗಿಯೂ ವಿಶೇಷ ಸಂದರ್ಭವಾಗಿದೆ ಎಂದಿದ್ದಾರೆ.
ಕ್ರಿಸ್ ಗೇಲ್ (2011-2017)
ಐಪಿಎಲ್ ನ ಆರಂಭಿಕ ಮೂರು ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಕ್ರಿಸ್ ಗೇಲ್, 2011ನೇ ಆವೃತ್ತಿಯಲ್ಲಿ ಆರ್ ಸಿಬಿ ಬಳಗವನ್ನು ಸೇರಿಕೊಂಡಿದ್ದರು. ಬೆಂಗಳೂರು ಪರ 91 ಪಂದ್ಯಗಳನ್ನಾಡಿರುವ ಗೇಲ್, 43.29 ರ ಸರಾಸರಿಯಲ್ಲಿ 3420 ರನ್ ಗಳಿಸಿದ್ದಾರೆ. 5 ಶತಕಗಳು ಮತ್ತು 21 ಅರ್ಧಶತಕಗಳು ಇದರಲ್ಲಿ ಸೇರಿವೆ. 154.40 ರ ಸ್ಟ್ರೈಕ್ ರೇಟ್ ಹೊಂದಿದ್ದ ಗೇಲ್, 2013ರಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅತಿವೇಗದ ಶತಕ ದಾಖಲಿಸುವುದರ ಜೊತೆ 175 ರನ್ ಗಳಿಸಿದ್ದರು. ಇದುವರೆಗಿನ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಇದು ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 2012ನೇ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದ ಗೇಲ್ ಒಟ್ಟು 733 ರನ್ಗಳಿಸಿದ್ದರು.
ಎಬಿ ಡಿ ವಿಲಿಯರ್ಸ್ (2011-2021)
ತಮ್ಮ ನೆಚ್ಚಿನ ತಂಡದಾಚೆಗೂ ಅಭಿಮಾನಿಗಳ ಪಾಲಿನ ಮಿ.360ಆಟಗಾರನಾಗಿದ್ದ ಎಬಿ ಡಿ ವಿಲಿಯರ್ಸ್, ಆರ್ ಸಿಬಿ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ನಿಂತು ಅಮೋಘವಾಗಿ ಬ್ಯಾಟ್ ಬೀಸಿ ಗೆಲುವು ತಂದು ಕೊಟ್ಟಿದ್ದರು. 2011ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ವಿಲಿಯರ್ಸ್, ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 157 ಪಂದ್ಯಗಳನ್ನಾಡಿರುವ ಎಬಿಡಿ, 41.10 ಸರಾಸರಿಯಲ್ಲಿ 158.33 ಸ್ಟ್ರೈಕ್ ರೇಟ್ ಹೊಂದುವ ಮೂಲಕ 4,522 ರನ್ ಕಲೆಹಾಕಿದ್ದಾರೆ. ಇದರಲ್ಲಿ2 ಸೊಗಸಾದ ಶತಕಗಳು ಮತ್ತು 37 ಅರ್ಧಶತಕಗಳು ಸೇರಿವೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್ಗೆ ಎಬಿ ಡಿವಿಲಿಯರ್ಸ್ ವಿದಾಯ ಹೇಳಿದ್ದರು.
ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್ಗೆ ‘ಹಾಲ್ ಆಫ್ ಫೇಮ್’ ಗೌರವ
Prasthutha|