ಚಿಕ್ಕೋಡಿ: ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬಾರದ ಹಿನ್ನೆಲೆ ಪೊಲೀಸರೇ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ 72 ವರ್ಷದ ಚಂದ್ರ ಶರ್ಮಾ ಮೃತ ವೃದ್ಧ.
ಸುಮಾರು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ ನಲ್ಲಿ ಯಾರೋ ಚಿಕಿತ್ಸೆಗೆಂದು ಕರೆತಂದ ವೃದ್ಧನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ನಂತರ ಪೊಲೀಸರೇ ಆ ವೃದ್ಧನನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು,ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಶನಿವಾರ ಆ ವೃದ್ಧ ಮೃತಪಟ್ಟಿದ್ದಾರೆ.
ನನ್ನ ಮಗ ದಕ್ಷಿಣ ಆಫ್ರಿಕಾದಲ್ಲಿ, ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ವೃದ್ಧ ಈ ಹಿಂದೆ ತಿಳಿಸಿದ್ದರು. ಬಳಿಕ ಪೊಲೀಸರು ಮಕ್ಕಳ ಫೋನ್ ನಂಬರ್ ಪಡೆದು ನಿರಂತರ ಕರೆ ಮಾಡಿದ್ದಾರೆ.
ವಿಷಯ ತಿಳಿಸಲು ಕರೆ ಮಾಡಿದಾಗ ನಮಗೂ ಅವರಿಗೆ ಸಂಬಂಧ ಇಲ್ಲ ಎಂದು ಮಗಳು ಕರೆ ಕಟ್ ಮಾಡಿದ್ದಾರೆ. ಕೊನೆಗೆ ಚಿಕ್ಕೋಡಿ ಪೊಲೀಸರೇ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.