ತೀರ್ಥಹಳ್ಳಿ: ಹಿಜಾಬ್ – ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಮಾಡುತ್ತಿದ್ದ ಮಾಧ್ಯಮಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಶಿವಮೊಗ್ಗ ಪತ್ರಕರ್ತರು ಮುಚ್ಚಳಿಕೆ ಬರೆದುಕೊಟ್ಟು ಪ್ರಕರಣದಿಂದ ಪಾರಾಗಲು ಯತ್ನಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿವೆ.
ಹಿಜಾಬ್ ಕುರಿತು ವರದಿ ಮಾಡುವ ಭರದಲ್ಲಿ ಶಿವಮೊಗ್ಗದ ವರದಿಗಾರರೊಬ್ಬರು ಸಣ್ಣ ಬಾಲಕಿಯೊಬ್ಬಳನ್ನು ಅಟ್ಟಾಡಿಸಿಕೊಂಡು ಹೋಗಿ ಫೋಟೋ ಕ್ಲಿಕ್ಕಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕೆಲವು ಮಾಧ್ಯಮಗಳ ಪತ್ರಕರ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಇದರಿಂದ ಸಮಿತಿಯ ಮುಂದೆ ಹಾಜರಾದ ಪತ್ರಕರ್ತರು ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದುಕೊಟ್ಟು ಪ್ರಕರಣದಿಂದ ಪಾರಾಗಲು ಯತ್ನಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬಾಲ ನ್ಯಾಯ ಮತ್ತು ಹಕ್ಕುಗಳ ಕಾಯ್ದೆ ( ಮಕ್ಕಳ ರಕ್ಷಣೆ ಮತ್ತು ಪೋಷಣೆ) 2015ರ ಸೆಕ್ಷನ್ 29ರ ಅಡಿಯಲ್ಲಿ ರಚನೆಯಾಗಿರುವ ಸಮಿತಿಯು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಪಾದಿತ ಮಾಧ್ಯಮಗಳ ಪತ್ರಕರ್ತರಿಗೆ ಎಚ್ಚರಿಕೆ ನೀಡಿದೆ.
ಮಕ್ಕಳ ಹಕ್ಕುಗಳ ಉಲ್ಲಂಘಣೆಯ ಕುರಿತು ಈ ತಿಂಗಳ 17 ರಂದು ಮಕ್ಕಳ ಕಲ್ಯಾಣ ಸಮಿತಿಯು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಮಾಧ್ಯಮದ ಜಿಲ್ಲಾ ಮುಖ್ಯಸ್ಥರು, ವರದಿಗಾರರು, ಫೋಟೋಗ್ರಾಪರ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಹಿಜಾಬ್ ಗೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್, ಟಿ.ವಿ. 9, ದಿಗ್ವಿಜಯ ಟಿವಿ, ಪವರ್ ಟಿವಿ, ನ್ಯೂಸ್ ಫಸ್ಟ್ ಲೈವ್ ಟಿ.ವಿ., ಪಬ್ಲಿಕ್ ಟಿ.ವಿ. ಮತ್ತು ಬಿ.ಟಿ.ವಿ. ಚಾನೆಲ್ಗಳಲ್ಲಿ ವರ್ಣರಂಜಿತ ವರದಿಗಳು ಪ್ರಸಾರವಾಗಿದ್ದವು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಿ.ಎಂ. ರೇಖಾ, ‘ಮಕ್ಕಳ ಹಕ್ಕುಗಳ ಉಲ್ಲಂಘಣೆಯನ್ನು ಪುನರಾವರ್ತಿಸದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದ್ದರು.