ಹಾಸನ: ಸಲಗ ಹತ್ಯೆ; ಕಳೇಬರದ ಮೇಲೆ ರಕ್ತಗಾಯದ ಗುರುತು

Prasthutha: May 27, 2022

ಬೇಲೂರು: ತಾಲೂಕಿನ ಗೂರ್ಗಿಹಳ್ಳಿ ಬಳಿ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮೇಲೆ ರಕ್ತ, ಗಾಯದ ಗುರುತುಗಳಿದ್ದು, ಗುಂಡಿಟ್ಟು ಕೊಲ್ಲಲಾಗಿದೆ ಎಂಬ ಅನುಮಾನ ಮೂಡಿದೆ.

ಗೂರ್ಗಿಹಳ್ಳಿ ಗ್ರಾಮದ ಸಯ್ಯದ್ ಸತ್ತಾರ್ ಎಂಬವರ ತೋಟದ ಸಮೀಪ ಅಂದಾಜು 15 ವರ್ಷದ ಗಂಡಾನೆ ಮೃತಪಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಕಳೇಬರ ಪತ್ತೆಯಾಗಿದೆ. ಆನೆ ಮೈಮೇಲೆ ಗಾಯದ ಗುರುತು ಕಂಡು ಬಂದಿದೆ. ಗುರುವಾರ ರಾತ್ರಿ ಗುಂಡಿಟ್ಟು ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ ತಿಳಿಸಿದರು.

ಕಾಡಾನೆ ಸಾವಿನ ವಿಚಾರ ಕೇಳಿ ಪ್ರಾಣಿ ಪ್ರಿಯರು ಆಘಾತ ಹೊರ ಹಾಕಿದ್ದು, ವೈದ್ಯರಾದ ಚಿಕ್ಕಮಗಳೂರಿನ ಶ್ರೇಯಸ್, ಗಂಗಾಧರ್ ಮರಣೋತ್ತರ ಪರೀಕ್ಷೆ ನಡೆಸಿದರು.

ಮಲೆನಾಡು ಭಾಗದಲ್ಲಿ ಆನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಗಜಪಡೆ ನಿರಂತರವಾಗಿ ಬೆಳೆ ಜೊತೆಗೆ ಆಸ್ತಿ ಪಾಸ್ತಿ ನಷ್ಟ ಮಾಡುತ್ತಿದ್ದರೆ ಮತ್ತೊಂದೆಡೆ ಇದರಿಂದ ರೋಸಿ ಹೋಗುವವರು ಆನೆಗಳ ಜೀವ ತೆಗೆಯಲು ಮುಂದಾಗಿದ್ದಾರೆ. ಇದೀಗ ಒಂಟಿ ಸಲಗದ ಸಾವು ಕೊಲೆ ಅನುಮಾನಕ್ಕೆ  ಪುಷ್ಟಿ ನೀಡಿದೆ.

ಭತ್ತ ಬೆಳೆದಿದ್ದ ಗದ್ದೆಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಹೊಟ್ಟೆ ತುಂಬಿಸಿಕೊಳ್ಳಲು ಬಂದಿದ್ದ ಸಲಗ ಕಳೇಬರವಾಗಿ ಮಲಗಿದೆ. ಈ ಮೂಲಕ ಕಳೆದ ಒಂದು ವರ್ಷದ ಅಂತರದಲ್ಲಿ ಸುಮಾರು ಐದು ಆನೆಗಳು ಅಸಹಜವಾಗಿ ಸಾವನ್ನಪ್ಪಿದ್ದು, ಇದು ಸಹಜವಾಗಿಯೇ ಆತಂಕವನ್ನುಂಟುಮಾಡಿದೆ.

ಆನೆಗಳನ್ನು ಕೊಲ್ಲುವುದು ತಪ್ಪು. ಆದರೆ ಆನೆಗಳು ತಮ್ಮ ಹಸಿವು ನೀಗಿಕೊಳ್ಳಲು ನಮ್ಮ ಆಹಾರವನ್ನು ತಿಂದು ಹಾಕುತ್ತಿವೆ. ನಾವು ನಮ್ಮ ಆಹಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಹಿಂಡು ಹಿಂಡಾಗಿ ಆನೆಗಳು ದಾಳಿ ಮಾಡುವ ಮೂಲಕ ನಿರಂತರವಾಗಿ ಅಮಾಯಕರ ಮೇಲೆ ದಾಳಿ ಮಾಡಿ ಜೀವ ತೆಗೆಯುತ್ತಿವೆ.

ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಆಗ್ರಹಿಸಿ ಹಲವು ಹೋರಾಟ ಮಾಡಿ ಜನಪ್ರತಿನಿಧಿಗಳು, ಸರ್ಕಾರದ ಗಮನ ಸೆಳೆದಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಸರ್ಕಾರ ಇತ್ತ ದೃಷ್ಟಿ ಹರಿಸುವ ಮೂಲಕ ಅಪಾರ ಬೆಳೆ ಹಾನಿ ಮತ್ತು ಸಾವು- ನೋವಿಗೆ ಕಾರಣವಾಗಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಈ ಮೂಲಕ ಮನುಷ್ಯರು ಮಾತ್ರವಲ್ಲ ಕಾಡು ಪ್ರಾಣಿಗಳೂ ಸಾಯುವುದು ನಿಲ್ಲಬೇಕು ಎಂದು ಜನರು ಆಗ್ರಹಿಸಿದರು.

ಈ ಮೊದಲು ಆಲೂರು, ಸಕಲೇಶಪುರ ಭಾಗದಲ್ಲಿ ಅಧಿಕವಾಗಿದ್ದ ಕಾಡಾನೆ ಕಾಟ ಇದೀಗ ಬೇಲೂರು ತಾಲೂಕಿಗೂ ವ್ಯಾಪ್ತಿಸಿರುವುದು ಆತಂಕ ತರಿಸಿದೆ. 30ಕ್ಕೂ ಹೆಚ್ಚು ಆನೆಗಳು ಬೇರೆಡೆಯಿಂದ ಇತ್ತ ಮುಖ ಮಾಡಿವೆ. ಈಗಲೂ ಅರೇಹಳ್ಳಿ, ಮಲಸಾವರ ಸುತ್ತಮುತ್ತ ಬೀಡುಬಿಟ್ಟಿದ್ದು. ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಇದು ಒಂದೆಡೆಯಾದರೆ ಇತ್ತೀಚೆಗಷ್ಟೆ ಅರೇಹಳ್ಳಿ ಭಾಗದಲ್ಲಿ ಕಾಡಾನೆ ದಾಳಿಗೆ ಕಡೇಗರ್ಜೆ ಗ್ರಾಮದ ಇಬ್ಬರು ಕಾರ್ಮಿಕರು ಬಲಿಯಾಗಿದ್ದರು. ನಂತರ ಮಹಿಳೆ ಮೇಲೂ ಅಟ್ಯಾಕ್ ಆಗಿತ್ತು. ಈ ಭಾಗದಲ್ಲಿ ಸಾವು ನೋವಿನ ಸರಣಿ ಹೆಚ್ಚಾಗಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!