ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನಿರಂತರ ಹುಲಿ ದಾಳಿ ಮುಂದುವರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮತ್ತಿಕಟ್ಟೆ ಎಂಬ ಗ್ರಾಮದಲ್ಲಿರುವ ಎಸ್ಟೇಟ್ ನ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ. ಸಂತೋಷ್ ಎಂಬುವರಿಗೆ ಸೇರಿದ್ದ ಹಸುವನ್ನು ಹುಲಿ ಕೊಂದಿದೆ.
ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ನರಭಕ್ಷಕ ಹುಲಿ ಅಲ್ಲಲ್ಲಿ ಹಸುಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದು , ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಹುಲಿಯನ್ನು ಹಿಡಿಯಬೇಕು ಎಂದು ರೈತರು, ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಅರಣ್ಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.