ಚಿಕ್ಕಮಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾರ್ಯಕರ್ತರ ನಡುವೆ ಮಾರಾಮಾರಿ

Prasthutha|

► ಗಾಂಜಾ ಹೊಡೆದು ಗಲಾಟೆ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷರಿಂದಲೇ ಕಾರ್ಯಕರ್ತರ ವಿರುದ್ಧ ಆರೋಪ

- Advertisement -

ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಬಿರುಕು ಉಂಟಾಗಿದೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖದಲ್ಲೇ ಕಾರ್ಯಕರ್ತರು ನಡುವೆ ಮಾರಾಮಾರಿ ನಡೆದಿದೆ

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಬೆಂಬಲಿಗರು ಮತ್ತು ಜಿಲ್ಲಾ ಕಾರ್ಯದರ್ಶಿ ನಿತೀಶ್ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದು, ಕಾರ್ಯದರ್ಶಿ ಹುದ್ದೆಯಿಂದ ನಿತೀಶ್ ಅವರನ್ನು ಉಚ್ಛಾಟಿಸಿದ್ದೇ ಘರ್ಷಣೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಯುವಕರ ವರ್ತನೆಯಿಂದ ಬೇಸತ್ತ ಮಂಜೇಗೌಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

- Advertisement -

ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ನಲ್ಲಿ ಜಾತಿ ರಾಜಕಾರಣ ಹೆಚ್ಚಿದೆ ಎಂಬ ಆರೋಪವಿದೆ. ಈ ಮಧ್ಯೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ 17 ಕಾರ್ಯಕರ್ತನ್ನು ಅಮಾನತು ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಕಾರ್ಯಕರ್ತರು ಸಮಯಕ್ಕೆ ಕಾಯುತ್ತಿದ್ದರು. ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನಡೆ ಖಂಡಿಸಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಿತೀಶ್ ನನ್ನ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ಇದೇ ಮೊದಲಲ್ಲ. ಕಳೆದ ಒಂದು ವರ್ಷದಲ್ಲಿ ಯೂತ್ ಕಾಂಗ್ರೆಸ್ ನದ್ದೇ ಸುಮಾರು ಮೂರು ಗಲಾಟೆಗಳಾಗಿವೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಮನವಿ ನೀಡುವ ವೇಳೆ ನಡು ರಸ್ತೆಯಲ್ಲಿ ಹೊಡೆದಾಡಿದ್ದರು.

ಗಲಾಟೆಯ ನಂತರ ನಿತೇಶ್ ವಿರುದ್ಧ ಸಂತೋಷ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿತೀಶ್ ಅವರನ್ನು ಅವರ ಜವಾಬ್ದಾರಿಯಿಂದ ನಾನು ತೆಗೆದು ಹಾಕಿಲ್ಲ. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಅವರ ಒಪ್ಪಿಗೆ ಮೇರೆಗೆ ಅವರನ್ನು ತೆಗೆಯಲಾಗಿದೆ. ನಲಪಾಡ್ ಅವರ ಲೆಟರ್ ಹೆಡ್ನಲ್ಲಿಯೇ ಅಮಾನತು ಪತ್ರ ರವಾನೆಯಾಗಿದೆ. ನಿತೀಶ್ ಯಾರು ಅಂತಾನೆ ನನಗೆ ಗೊತ್ತಿಲ್ಲ, ಅವನ ಮುಖವನ್ನೇ ನಾನು ನೋಡಿಲ್ಲ’ ಎಂದು ಸಂತೋಷ್ ಪ್ರತಿಕ್ರಿಯಿಸಿದ್ದಾರೆ.

ಗಲಾಟೆ ಮಾಡಲೆಂದು ಗಾಂಜಾ ಸೇವಿಸಿ ಹುಡುಗರು ಬಂದಿದ್ದರು. ನಾನು ವೀರಶೈವ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಕೂಡ ಆಗಿದ್ದೇನೆ. ವೀರಶೈವ ಸಮಾಜಕ್ಕೆ ಸೇರಿದವರು ರಾಜಕೀಯವಾಗಿ ಮುಂದೆ ಬರಬಾರದು ಎನ್ನುವ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾರೆ ಎನಿಸುತ್ತದೆ. ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ರಾಜ್ಯ ರಾಜಕಾರಣದಲ್ಲಿ ಉನ್ನತ ನಾಯಕರ ಮಧ್ಯೆ ಮುಂದಿನ ಸಿಎಂ ಯಾರು ಎಂಬ ಬಗ್ಗೆ ವಾಗ್ವಾದಗಳು ನಡೆಯುತ್ತಿದ್ದರೆ ಇತ್ತ ಕಾರ್ಯಕರ್ತರು ಪರಸ್ಪರ ಕಿತ್ತಾಡುತ್ತಿದ್ದಾರೆ.

Join Whatsapp