ಚಿಕ್ಕಮಗಳೂರು: ನನ್ನ ಮಗಳು ಮುಸ್ಲಿಮ್ ಯುವಕನನ್ನು ಮದುವೆಯಾಗಿರುವುದಕ್ಕೆ ಸಂಪೂರ್ಣ ಒಪ್ಪಿಗೆಯಿದೆ ಎಂದು ಯುವತಿಯ ತಾಯಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ರಿಜಿಸ್ಟರ್ ಮ್ಯಾರೇಜ್ ಆಗಲು ಹೊರಟಿದ್ದ ಸಂದರ್ಭ ಸಂಘಪರಿವಾರದ ಕಾರ್ಯಕರ್ತರು ಅವರನ್ನು ತಡೆದಿರುವ ಘಟನೆ ನಡೆದಿದೆ.
ಆದರೆ ಈ ಮದುವೆಗೆ ನನ್ನ ಯಾವುದೇ ಆಕ್ಷೇಪವಿಲ್ಲ, ಅವರಿಬ್ಬರು ಸಂತೋಷವಾಗಿದ್ದರೆ ಅಷ್ಟೇಸಾಕು ಎಂದು ಯುವತಿಯ ತಾಯಿ ಹೇಳಿಕೆ ನೀಡಿದ್ದಾರೆ.
ಅನ್ಯ ಕೋಮಿನ ಯುವಕ ಹಾಗೂ ಯುವತಿ ವಿವಾಹ ನೋಂದಣಿ ಮಾಡಲೆಂದು ಇಂದು ಹೋಗಿದ್ದರು. ಈ ಸಂದರ್ಭ ಸಂಘಪರಿವಾರದ ಕಾರ್ಯಕರ್ತರು ಯುವಕನಿಗೆ ಹಲ್ಲೆ ನಡೆಸಿದ್ದಾರೆ. ಯುವಕನ ದೂರಿನನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಗೆ ಆಗಮಿಸಿದ ಯುವತಿಯ ತಾಯಿ ಶೋಭಾ, ನನ್ನ ಮಗಳ ಜೀವವೇ ನನಗೆ ಮುಖ್ಯ. ಅವರಿಬ್ಬರ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಹಾಗೂ ನನ್ನ ಅಳಿಯನಿಗೆ ಯಾವುದೇ ತೊಂದರೆಯಾಗಬಾರದು ಎಂದು ಕಣ್ಣೀರು ಹಾಕಿದ್ದಾರೆ.