ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Prasthutha|

ಮೈಸೂರು : ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

- Advertisement -

ಅವರು ಇಂದು ಕರ್ನಾಟಕ ರಾಜ್ಯ ವಕೀಲರ  ಪರಿಷತ್ ಆಯೋಜಿಸಲಾಗಿದ್ದ 10ನೇ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದ ಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಸಮಾಜದಲ್ಲಿ ಇರುವ ಅಸಮಾನತೆ ತೊಡೆದುಹಾಕಲು ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಎಲ್ಲರೂ ಓದಿದರೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಸಮಾಜ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎಂದು ಕೇಳಿಕೊಳ್ಳುವುದು ಮುಖ್ಯ. ಆ ದೃಷ್ಟಿಯಿಂದ ಚಿಂತನೆ ಮಾಡಬೇಕು ಎಂದು ಅವರು ಹೇಳಿದರು.

- Advertisement -

ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಅಗತ್ಯ

ಕೆಳ ನ್ಯಾಯಾಲಯಗಳಲ್ಲಿ ಮೀಸಲಾತಿ ಇದೆ. ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಮೀಸಲಾತಿ ಜಾರಿಯಾದರೆ ಹೆಚ್ಚು ಉಪಯುಕ್ತ ವಾದ ನ್ಯಾಯದಾನ ನೀಡಲು ಸಾಧ್ಯ ಎಂದು ತಿಳಿಸಿದರು.

ಕಾನೂನಿನ ದೃಷ್ಟಿ ಯಲ್ಲಿ ಎಲ್ಲರೂ ಸಮಾನರು.

ಸಂವಿಧಾನ ಬರುವ ಮುನ್ನ ಒಂದು ರೀತಿಯ ನ್ಯಾಯದಾನ ವ್ಯವಸ್ಥೆ ಇತ್ತು. ಸಂವಿಧಾನ ಬಂದ ನಂತರ ಭಿನ್ನವಾಗಿದೆ. ಬ್ರಿಟಿಷರ ಕಾಲದಲ್ಲಿ ಹಾಗೂ ಸ್ವಾತಂತ್ರ್ಯ ದೊರೆತ ನಂತರ ಭಿನ್ನವಾಗಿದೆ. ಅದಕ್ಕೂ ಮುನ್ನ ರಾಜ ಮಹಾರಾಜರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಅವರ ತೀರ್ಮಾನ ಮನುವಾದದ ರೀತಿಯ ಮೇಲೆ ತೀರ್ಮಾನವಾಗುತ್ತಿದ್ದವು. ಜಾತಿ ವ್ಯವಸ್ಥೆ ಬಲವಾಗಿದ್ದುದರಿಂದ ಒಂದೇ ರೀತಿಯ ತಪ್ಪಿಗೆ ಬೇರೆ ಬೇರೆ ಶಿಕ್ಷೆಗಳಿದ್ದವು. ಶ್ರೀಮಂತರಿಗೆ, ಮೇಲ್ಜಾತಿಯವರಿಗೆ, ಕೆಲವರ್ಗದವರಿಗೆ, ಬಡವರಿಗೆ ಬೇರೆ ರೀತಿಯ ಶಿಕ್ಷೆ ಆಗುತ್ತಿತ್ತು. ಸಂವಿಧಾನ ಬಂದ ನಂತರ ಆರ್ಟಿಕಲ್ 14 ರಲ್ಲಿ  Equality before Law, Equal Protection of Law ಎಂದು ಒಪ್ಪಿಕೊಂಡಿದ್ದೇವೆ. ಕಾನೂನಿನ ದೃಷ್ಟಿ ಯಲ್ಲಿ ಎಲ್ಲರೂ ಸಮಾನರು  ಎಂದರು.

ಸಮಾಜದಲ್ಲಿ ದಡ್ಡರೂ ಅಲ್ಲ, ಬುದ್ಧಿವಂತರೂ ಅಲ್ಲ

 ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕೆಂದು ನಮ್ಮ ಸಂವಿಧಾನ ಬಹಳ ಸ್ಪಷ್ಟವಾಗಿ ಹೇಳಿದೆ. ಸುಪ್ರಸಿದ್ಧ ವಕೀಲರನ್ನು ಕರ್ನಾಟಕ ಬಾರ್ ಕೌನ್ಸಿಲ್ ಕಳುಹಿಸಿಕೊಟ್ಟಿರುವುದು ಹೆಮ್ಮೆಯ ವಿಚಾರ. ಬಹಳ ಜನ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಗಿದ್ದಾರೆ, ತಜ್ಞರಾಗಿದ್ದಾರೆ. ಕರ್ನಾಟಕದಲ್ಲಿ ಬಹಳ ಜನ ಪ್ರತಿಭಾವಂತ ವಕೀಲರಿದ್ದಾರೆ.  ಯಾರು ಸಮಾಜದಲ್ಲಿ ದಡ್ಡರೂ ಅಲ್ಲ, ಬುದ್ಧಿವಂತರೂ ಅಲ್ಲ. ಅವಕಾಶದಿಂದ ವಂಚಿತರಾದವರು ದಡ್ಡರು ಹಾಗೂ ಅವಕಾಶ ದೊರತವರು ಬುದ್ಧಿವಂತರು. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ದೊರೆತಿರುವುದರಿಂದ ಕೆಳವರ್ಗದವರೂ ಕೂಡ ಉನ್ನತ ಸ್ಥಾನಗಳಿಗೆ ಹೋಗಲು ಸಾಧ್ಯವಾಗುತ್ತದೆ. ನಾನು ಮೈಸೂರಿಗೆ ಬಂದಾಗ ಕುರುಬರಲ್ಲಿ ಒಬ್ಬನೇ ವಕೀಲನಾಗಿದ್ದೆ ಎಂದು ಮುಖ್ಯ ಮಂತ್ರಿಗಳು  ಸ್ಮರಿಸಿದರು.

ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಸಂದರ್ಭದಲ್ಲಿ ಎಲ್ಲಾ ಕಾಲದಲ್ಲೂ ಇದ್ದಾರೆ

ಎಲ್ಲಾ ಮೇಲ್ವರ್ಗದವರೇ ವಕೀಲರಾಗಿದ್ದರು . ಕೆಳಜಾತಿಯವರಿಗೆ ವಕೀಲರಾಗುವುದು ಬೇಡ ಎಂದೂ ಹೇಳುತ್ತಿದ್ದರು. ನನಗೇ ಇದರ ಅನುಭವವಾಗಿದೆ ಎಂದರು.  ಶಾನುಭೋಗರೊಬ್ಬರು ಮಗನನ್ನು ಕಾನೂನು ಕಲಿಸಬೇಡ ಎಂದು ತಮ್ಮ ತಂದೆಗೆ ಹೇಳಿದ್ದರು. ಅವರ ಮಾತು ಕೇಳಿ ಕಾನೂನು ಓದದೇ ಹೋಗಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು. ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಸಂದರ್ಭದಲ್ಲಿ ಎಲ್ಲಾ ಕಾಲದಲ್ಲೂ ಇದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಸಮುದಾಯದಿಂದ ಬಂದವರು. ಅವರಿಗೆ ಬರೋಡಾ ಮಹಾರಾಜರು ವಿದೇಶಕ್ಕೆ ತೆರಳಲು ಅವಕಾಶ ನೀಡದೆ ಹೋಗಿದ್ದರೆ, ಇಂಥ ಸಂವಿಧಾನ ಸಿಗುತ್ತಿರಲಿಲ್ಲ. ಸಂವಿಧಾನವನ್ನು ವಿರೋಧಿಸುವವರೂ ಇದ್ದಾರೆ ಸಮಾಜದಲ್ಲಿ. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳ ತಲೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.ಎಳೆ ವಯಸ್ಸಿನಲ್ಲಿ ಸಂವಿಧಾನದ ವಿರುದ್ಧ ದಾರಿತಪ್ಪಿಸುತ್ತಾರೆ.  ಬಡವರಿಗೆ , ದಲಿತರಿಗೆ, ಅವಕಾಶ ವಂಚಿತರಿಗೆ ನ್ಯಾಯ ಸಿಗಬೇಕು. ಸಂವಿಧಾನದ ವಿರುದ್ಧ ಇರುವವರಿಂದ ನ್ಯಾಯ, ಬಡವರಿಗೆ ರಕ್ಷಣೆ ಸಿಗಲು ಸಾಧ್ಯವೇ? ಈ ಬಗ್ಗೆ ಗಂಭೀತವಾಗಿ ಚರ್ಚೆ ಮಾಡಬೇಕಿದೆ. ಇಂಥ ಸಮಾವೇಶ ಗಳನ್ನು  ಮಾಡುವಾಗ ಈ ವಿಚಾರಗಳ ಬಗ್ಗೆ ಚರ್ಚಿಸಬೇಕು ಎಂದರು.

Join Whatsapp