ವಿಶ್ವಗುರುವಿಗೆ ವಿರೋಧ ಪಕ್ಷದ ನಾಯಕ ಸಿಗುತ್ತಿಲ್ಲ; ರಾಜಕೀಯವಾಗಿ ಬಿಜೆಪಿ ದಿವಾಳಿ: ಸಿದ್ದರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

- Advertisement -

ಈ ಕುರಿತು ಸದನದಲ್ಲಿ ಗುರುವಾರ ಬಜೆಟ್‌ ಕುರಿತು ಉತ್ತರ ನೀಡಿದ ಅವರು, ಮೊದಲ ಬಾರಿಗೆ ,ನಾನು ಹದಿನಾಲ್ಕು ಬಜೆಟ್ ಮಂಡನೆ ಮಾಡಿದ್ದೇನೆ. ಮೊದಲ ಬಾರಿಗೆ ವಿಪಕ್ಷ ನಾಯಕ ಇಲ್ಲದೆ ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣ ಆಗಿದೆ, ಇದು ಬಹಳ ದುಃಖದ ಸಂಗತಿ. ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಎರಡು ಬಹಳ ಪ್ರಮುಖ ಆಗಿರುವುದು, ಈ ಎರಡು ವಿಷಯಗಳು ವಿಪಕ್ಷ ನಾಯಕ ಇಲ್ಲದ ಸಮಯದಲ್ಲಿ ನಡೆದಿರೋದು ಇದೆ ಮೊದಲು ಎಂದು ಬೇಸರ ವ್ಯಕ್ತಪಡಿಸಿದರು.

1983 ರಿಂದ ನಾನು ಸದನದಲ್ಲಿ ಇದ್ದೇನೆ. ಇದೆ ಮೊದಲ ಬಾರಿಗೆ ಈ ರೀತಿ ಆಗಿದೆ, ಈಗಾಗಲೇ ರಾಜಕೀಯವಾಗಿ ಬಿಜೆಪಿ ದಿವಾಳಿ ಆಗಿದೆ. ಇದು ಪ್ರಜಾಪ್ರಭುತ್ವಕ್ಕೆ‌ ಮಾರಕ, ಸಂವಿಧಾನದ, ಸಂಸದೀಯವಾಗಿ ನಂಬಿಕೆ ಇಲ್ಲ, ಇನ್ನೂ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಯಾವುದೇ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲಾ ಪಕ್ಷಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನದ ಆಶಯಗಳನ್ನು ಉಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಪ್ರಯತ್ನಿಸಬೇಕು. ನಾನು ಮೊದಲ ಬಾರಿಗೆ ವಿಪಕ್ಷ ಗಳು ಇಲ್ಲದೇ ಬಜೆಟ್‌ ಗೆ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ. ನನ್ನ ಎದುರುಗಡೆ ಒಬ್ಬ ಸದಸ್ಯರು ಇಲ್ಲದೇ ಖಾಲಿ ಕುರ್ಚಿಗಳಿಗೆ ನಾನು ಉತ್ತರ ಕೊಡ್ತಿರೋದು ಬಹಳ ದುಃಖದ ಸಂಗತಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

- Advertisement -

ನಮ್ಮ ಗ್ಯಾರಂಟಿಯಿಂದ ಹೊಟ್ಟೆ ಉರಿ

ಬಿಜೆಪಿಯವರಿಗೆ ಕರ್ತವ್ಯಕ್ಕಿಂತ ರಾಜಕೀಯನೇ ಜಾಸ್ತಿ. ಬಿಜೆಪಿಯವರು ರಾಜಕೀಯ ಮಾಡಲಿ, ಅವರು ಎಷ್ಟು ರಾಜಕೀಯ ಮಾಡಿದ್ರು ನಾವು ಹೆದರುವುದಿಲ್ಲ, ಅವರಿಗೆ ನಮ್ಮ ಗ್ಯಾರಂಟಿ ಘೋಷಣೆಗಳು ಶುರುವಾಗಿರುವುದರಿಂದ ಹೊಟ್ಟೆ ಉರಿ ಶುರುವಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಕೋಮುವಾದಿ, ಧರ್ಮ ಧರ್ಮಗಳ ನಡುವೆ ದ್ವೇಷ ಹಬ್ಬಿಸುವ ಪಕ್ಷ. ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಬಾರದು, ಅವರು ಯಾವಾಗಲೂ ವಿಪಕ್ಷವಾಗಿಯೇ ಇರಬೇಕು, ಬಿಜೆಪಿ ಮುಕ್ತ ಭಾರತ ಆಗಲಿ, ಬಿಜೆಪಿ ಮುಕ್ತ ಕರ್ನಾಟಕ ಆಗಲಿ ಅಂತ ನಾನು ಹೇಳಲ್ಲ. ಬಿಜೆಪಿ‌ ಅವನತಿ ಕರ್ನಾಟಕದಿಂದ ಶುರುವಾಗಿದೆ. ಬಿಜೆಪಿಯವರು ಮೋದಿ ಮೇಲೆ ಅವಲಂಬನೆ ಆಗಿದ್ದಾರೆ. ಮೋದಿಯವರ ವರ್ಚಸ್ಸು ದಿನೇ ದಿನೇ ಮಸುಕಾಗ್ತಿದೆ. ವಿಧಾನಸಭೆ ಚುನಾವಣೆ ವೇಳೆ ಮೋದಿಯವರು 28 ಬಾರಿ ಬಂದಿದ್ದಾರೆ ಎಂದು ಕುಟುಕಿದರು.

ಮೋದಿ ಕಂಡರೆ ಚಳಿಜ್ವರ ಬಂದಂಗೆ ನಡುಗುತ್ತಾರೆ

15 ನೇ ಹಣಕಾಸು ಆಯೋಗದಿಂದ ಕರ್ನಾಟಕ ನಾಡಿಗೆ ಅಪಾರ ಅನ್ಯಾಯ ಆಯಿತು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನಮ್ಮ ಪಾಲಿನ, ನಮ್ಮ ಹಕ್ಕಾಗಿದ್ದ 5495 ಕೋಟಿ ಬರಲಿಲ್ಲ. ಕರ್ನಾಟಕದಿಂದಲೇ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಂದ ಇಷ್ಟು ದೊಡ್ಡ ಅನ್ಯಾಯ ಆಯಿತು. ಇದನ್ನು ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರು ಪ್ರಶ್ನಿಸಬೇಕಿತ್ತು. ರಾಜ್ಯ ಬಿಜೆಪಿ ನಾಯಕರು, ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿತ್ತು. ಆದರೆ ಇವರೆಲ್ಲಾ ಕನ್ನಡಿಗರ ಪಾಲನ್ನು ಕೇಳುವ ಬದಲು ಮೋದಿ ಅವರ ಎದುರು ನಿಂತು ಚಳಿ ಜ್ವರ ಬಂದವರಂತೆ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.

ಮೋದಿ ಹೋದ ಕಡೆಗಳೆಲ್ಲ ನಾವು ಗೆದ್ದಿದ್ದೇವೆ!

ಇತಿಹಾಸದಲ್ಲೇ ಯಾವ ಪ್ರಧಾನಿಗಳು ಒಂದು ಅಸೆಂಬ್ಲಿ ಚುನಾವಣೆಗೆ ಇಷ್ಟು ಬಾರಿ ಬಂದು ಚುನಾವಣೆ ಪ್ರಚಾರ ಮಾಡಿಲ್ಲ. ರಾಜ್ಯದಲ್ಲಿ 28 ಬಾರಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದಾರೆ. ಮೈಸೂರು, ಬಾದಾಮಿ, ಬೆಂಗಳೂರು ಸೇರಿ ಎಲ್ಲ ಕಡೆಯೂ ರೋಡ್ ಶೋ ಮಾಡಿದ್ದಾರೆ, ಮೋದಿ ಹೋದ ಕಡೆಗಳೆಲ್ಲ ನಾವು ಗೆದ್ದಿದ್ದೇವೆ. ಅವರು ಹೋದ ಕಡೆಗಳಲ್ಲೇ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆದ್ದಿದ್ದಾರೆ ‌ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

Join Whatsapp