ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತ ವೈದ್ಯರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ‘ತಪ್ಪಿತಸ್ಥರʼ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ವಿ ರಮಣ ಅವರ ಮುಂದೆ ಪತ್ರ ಮನವಿಯೊಂದು (ಲೆಟರ್ ಪೆಟಿಷನ್) ಸಲ್ಲಿಕೆಯಾಗಿದೆ.
ಪ್ರತಿಭಟನಾನಿರತ ವೈದ್ಯರ ಅಹವಾಲು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲ ವಿನೀತ್ ಜಿಂದಾಲ್ ಅವರ ಮನವಿಯಲ್ಲಿ ಕೋರಲಾಗಿದೆ.
“ಒಂದು ಕಾಲದಲ್ಲಿ ತಮ್ಮ ಅವಿರತ ಸೇವೆಗೆ ಶ್ಲಾಘನೆ ಮತ್ತು ಮೆಚ್ಚುಗೆ ಪಡೆಯುತ್ತಿದ್ದ ವೈದ್ಯರು, ಈಗ ಅತಿಯಾದ ಹೊರೆ ಮತ್ತು ಬಳಲಿಕೆಯ ಸ್ಥಿತಿ ಎದುರಿಸುತ್ತಿರುವುದು ದುಃಖದ ಸಂಗತಿ. ಈ ಸ್ಥಾನಿಕ ವೈದ್ಯರ ಮನವಿಗೆ ಅಧಿಕಾರಿಗಳು ಕಿವುಡಾಗಿರುವಂತೆ ತೋರುತ್ತಿದೆ. ಹೊಸ ಬ್ಯಾಚಿನ ಸ್ಥಾನಿಕ ವೈದ್ಯರಿಗೆ ಪ್ರವೇಶಾವಕಾಶ ನೀಡದೇ ಇರುವುದರಿಂದ ಆರೋಗ್ಯ ರಕ್ಷಣಾ ಸಿಬ್ಬಂದಿಯ ಕೊರತೆ ಎದುರಾಗಿರುವುದು ಆತಂಕದ ವಿಚಾರ. ಇದಲ್ಲದೆ ಈ ವೈದ್ಯರು ಪ್ರತಿಯೊಂದು ಅಂಶದಲ್ಲೂ ವೃತ್ತಿಪರವಾಗಿ ಮೇಲ್ದರ್ಜೆಗೆ ಏರುವ ತಮ್ಮ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದಾರೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಸ್ನಾತಕೋತ್ತರ ಕೋರ್ಸ್ಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಶೀಘ್ರವಾಗಿ ನಡೆಸಬೇಕೆಂದು ಒತ್ತಾಯಿಸಿ ಹಲವಾರು ಯುವ ಸ್ಥಾನಿಕ ವೈದ್ಯರು ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿವರ್ಷ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದ ಕೌನ್ಸೆಲಿಂಗ್ ಕೋವಿಡ್ ಕಾರಣಕ್ಕೆ 2021 ರಲ್ಲಿ ವಿಳಂಬವಾಯಿತು. ನೀಟ್ ಪಿಜಿ ಪ್ರವೇಶ ಪರೀಕ್ಷೆ ಈ ವರ್ಷದ ಸೆಪ್ಟೆಂಬರ್ನಲ್ಲಿ ಮಾತ್ರ ನಡೆದಿದ್ದು, ಕೌನ್ಸೆಲಿಂಗ್ ಇನ್ನೂ ಆರಂಭವಾಗಿಲ್ಲ
ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್) ಶೇ 10 ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಬಾಕಿ ಉಳಿದಿರುವುದು ಇದಕ್ಕೆ ಕಾರಣ.
ಈ ಹಿಂದೆ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರ “ಪ್ರಕರಣವನ್ನು ನ್ಯಾಯಾಲಯ ನಿರ್ಧರಿಸುವವರೆಗೆ ಪಿಜಿ ವೈದ್ಯಕೀಯ ಕೋರ್ಸ್ಗಳ ಕೌನ್ಸೆಲಿಂಗ್ ಆರಂಭಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ಗೆ ಭರವಸೆ ನೀಡಿತ್ತು. ಪ್ರಕರಣದ ವಿಚಾರಣೆ ಜನವರಿ 6, 2022ಕ್ಕೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 50,000 ಸ್ಥಾನಿಕ ವೈದ್ಯರ ಪ್ರವೇಶವನ್ನು ತಡೆ ಹಿಡಿಯಲಾಗಿದೆ.
ವಕೀಲ ಜಿಂದಾಲ್ ಅವರು ಸಲ್ಲಿಸಿರುವ ಮನವಿಯಲ್ಲಿ ನೀಟ್- ಇಡಬ್ಲ್ಯೂಎಸ್ ಮೀಸಲಾತಿ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಕೈಗೆತ್ತಿಕೊಂಡು ಪ್ರತಿದಿನ ವಿಚಾರಣೆ ನಡೆಸಬೇಕು. ಒಮಿಕ್ರಾನ್ ಭೀತಿ ಇರುವುದರಿಂದ ಇದು ಅತ್ಯಗತ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ವಿಳಂಬ ಧೋರಣೆ ಅನುಸರಿಸಿದರೆ ಅದು ವೈದ್ಯರ ಮೇಲಷ್ಟೇ ಅಲ್ಲದೆ ವೈದ್ಯಕೀಯ ಸೇವೆ ಅಗತ್ಯ ಇರುವ ಜೀವಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.