ಛತ್ತೀಸ್ ಗಢ: ಸಂಘಪರಿವಾರದ ಹಿಂದುತ್ವ ಗುಂಪುಗಳು ಕವರ್ಧಾ ಪಟ್ಟಣದಲ್ಲಿ ಜಾಥಾದ ನೆಪದಲ್ಲಿ ಹಿಂಸೆ ನಡೆಸಿದ್ದು, ಅಪಾರ ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗಿದೆ. ಇದೀಗ ಜಿಲ್ಲಾಡಳಿತ ನಗರದಲ್ಲಿ ಕರ್ಫ್ಯೂ ಹೇರಿದೆ.
ಬಲಪಂಥೀಯ ಸಂಘಟನೆಗಳು ಸಂಘಟಿಸಿದ ಜಾಥಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಮತ್ತು ಬಿಜೆಪಿ ಸಂಸದ ರಾಜನಂದಗಾಂವ್ ಸಂತೋಷ್ ಪಾಂಡೆ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಕ್ಷುಬ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಘಪರಿವಾರ ಆಯೋಜಿಸಿದ್ದ ಜಾಥಾದ ವೇಳೆಯಲ್ಲಿ ಗಲಭೆಕೋರರು ಮನೆ ಮತ್ತು ಅಂಗಡಿಗಳನ್ನು ಗುರಿಯಾಗಿಸಿ ಕಲ್ಲುತೂರಾಟ ನಡೆಸಿದ್ದರು ಮತ್ತು ವಾಹನಗಳನ್ನು ದೋಚಲಾಗಿತ್ತು. ಈ ಸಂದರ್ಭದಲ್ಲಿ ಹಲವರಿಗೆ ಗಾಯಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸುಮಾರು 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕವರ್ಧಾ ಜಿಲ್ಲೆಯಲ್ಲಿ ಧಾರ್ಮಿಕ ಧ್ವಜಗಳನ್ನು ತೆರವುಗೊಳಿಸುವ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಎರಡು ದಿನಗಳ ಹಿಂದೆ ಘರ್ಷಣೆ ನಡೆದಿತ್ತು.
ಈ ಮಧ್ಯೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೇ ಆಯೋಜಿಸಿದ ಜಾಥಾದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ರಾಜ್ಯ ರಾಜಧಾನಿ ರಾಯಪುರದಿಂದ ಆರಂಭವಾದ ಜಾಥಾದಲ್ಲಿ ವ್ಯಾಪಕವಾದ ಹಿಂಸಾಚಾರದಿಂದಾಗಿ ಬೆಳಗ್ಗೆ 11.30 ಕ್ಕೆ ಜಿಲ್ಲಾಡಳಿತ ಕರ್ಫ್ಯೂ ಹೇರಿತು ಎಂದು ಕಬೀರಧಾಮ ಜಿಲ್ಲಾಧಿಕಾರಿ ರಮೇಶ್ ಶರ್ಮಾ ತಿಳಿಸಿದ್ದಾರೆ.