ಚೆನ್ನೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸತತ ಎರಡು ಸೋಲು ಕಂಡು ನಿರಾಶವಾಗಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವಿನ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ 78 ರನ್ಗಳ ಗೆಲುವು ಸಾಧಿಸಿದೆ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಚೆನ್ನೈ ತಂಡ ನಾಯಕ ಋತುರಾಜ್ ಗಾಯಕ್ವಾಡ್, ಡೇರಿಯಲ್ ಮಿಚೆಲ್ ಮತ್ತು ಶಿವಂ ದುಬೆ ಅವರ ಆಕ್ರಮಣಕಾರಿ ಬ್ಯಾಟಿಂಗ್ ಸಾಹಸದಿಂದ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಸಲೀಸಾಗಿ ಮೂರು ಬಾರಿ 250ರ ಗಡಿ ದಾಟಿದ್ದ ಸನ್ರೈಸರ್ಸ್ ತಂಡಕ್ಕೆ ಈ ಮೊತ್ತ ಎಲ್ಲಿಂದಲೂ ಸಾಲದು ಎಂದು ನಿರೀಕ್ಷೆ ಮಾಡಿದ್ದವರಿಗೆ ಚೆನ್ನೈ ತಂಡದ ಮಧ್ಯಮ ವೇಗಿ ತುಷಾರ್ ದೇಶ್ಪಾಂಡೆ ಘಾತಕ ಸ್ಫೆಲ್ ಮೂಲಕ ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್ 18.5 ಓವರ್ಗಳಲ್ಲಿ 134 ರನ್ಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ಗೆ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ ಬೌಂಡರಿ ಮೂಲಕ ರನ್ ಖಾತೆ ತೆರೆದರು. ಮುಂದಿನ ಓವರ್ನಲ್ಲಿ ತುಷಾರ್ ದೇಶ್ಪಾಂಡೆಗೆ ಸಿಕ್ಸರ್ ರುಚಿ ತೋರಿಸಿದರು. ಅಭಿಷೇಕ್ ಶರ್ಮ ಕೂಡ ಒಂದು ಸಿಕ್ಸರ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಈ ವೇಳೆ ಧೋನಿ ನೀಡಿದ ಸಲಹೆಯನ್ನಾಧರಿಸಿ ಇದೇ ಓವರ್ನಲ್ಲಿ ತುಷಾರ್ ದೊಡ್ಡ ಬೇಟೆಯಾಡುವಲ್ಲಿ ಯಶಸ್ವಿಯಾದರು. ಟ್ರಾವಿಸ್ ಹೆಡ್(13) ಮತ್ತು ಅನ್ಮೋಲ್ಪ್ರೀತ್ ಸಿಂಗ್(0) ಖಾತೆ ತರೆಯುವ ಮುನ್ನವೇ ವಿಕೆಟ್ ಕಿತ್ತು ಪೆವಿಲಿಯನ್ ಕಡೆಗೆ ದಾರಿ ತೋರಿದರು. 21 ರನ್ಗೆ 2 ವಿಕೆಟ್ ಕಳೆದುಕೊಂಡ ಹೈದರಾಬಾದ್ ಈ ಆಘಾತವನ್ನು ಅರಗಿಸಿಕೊಳ್ಳುವ ಮುನ್ನವೇ ಅಭಿಷೇಕ್ ಶರ್ಮ(15) ವಿಕೆಟ್ ಕೂಡ ಪತನಗೊಂಡಿತು. ಈ ವಿಕೆಟ್ ಕೂಡ ತುಷಾರ್ ಪಾಲಾಯಿತು. ಅಲ್ಲಿಗೆ ಅಗ್ರ ಕ್ರಮಾಂಕದ ಮೂರು ವಿಕೆಟ್ ಕೂಡ ತುಷಾರ್ ಕಿತ್ತರು.
40 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಐಡೆನ್ ಮಾರ್ಕ್ರಮ್ ಮತ್ತು ನಿತೀಶ್ ರೆಡ್ಡಿ ಕೆಲ ಕಾಲ ಆಸರೆಯಾದರೂ ಕೂಡ ಇವರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಕೇವಲ 4 ಬೌಂಡರಿ ನೆರವಿನಿಂದ ಮಾರ್ಕ್ರಮ್ 32 ರನ್ ಗಳಿಸಿ ಪತಿರಾಣ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ನಿತೀಶ್ ರೆಡ್ಡಿ ಎಸೆತವೊಂದರಂತೆ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾದ ಹೆನ್ರಿಚ್ ಕ್ಲಾಸೆನ್ ಮತ್ತು ಅಬ್ದುಲ್ ಸಮದ್ ಕೂಡ ಈ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದರು. ಕ್ಲಾಸೆನ್ 21 ಎಸೆತ ಎದುರಿಸಿ 20 ರನ್ ಗಳಿಸಿದರು. ಸಿಡಿದದ್ದು 1 ಸಿಕ್ಸರ್ ಮಾತ್ರ. ಅಬ್ದುಲ್ ಸಮದ್ 18 ಎಸೆತಗಳಿಂದ 19 ರನ್ ಕಲೆಹಾಕಿದರು. ಡೇರಿಯಲ್ ಮಿಚೆಲ್ ಈ ಪಂದ್ಯದಲ್ಲಿ 5 ಕ್ಯಾಚ್ ಹಿಡಿದು ಮಿಂಚಿದರು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ಆರಂಭದಲ್ಲೇ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಂಡರೂ ಕೂಡ ಇದರಿಂದ ವಿಚಲಿತರಾಗಲಿಲ್ಲ. ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಡೇರಿಯಲ್ ಮಿಚೆಲ್ ಸೇರಿಕೊಂಡು ಹೈದರಾಬಾದ್ ಬೌಲರ್ಗಳ ಮೇಲೆ ಸವಾರಿ ನಡೆಸಿ ಅರ್ಧಶತಕ ಬಾರಿಸಿದರು. ಗಾಯಕ್ವಾಡ್ ಕೇವಲ 27 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಜಯ್ದೇವ್ ಉನಾದ್ಕತ್ ಬೇರ್ಪಡಿಸುವಲ್ಲಿ ಯಶಸ್ಸು ಕಂಡರು. ಗಾಯಕ್ವಾಡ್ ಮತ್ತು ಮಿಚೆಲ್ ದ್ವಿತೀಯ ವಿಕೆಟ್ಗೆ 107 ರನ್ಗಳ ಅಮೋಘ ಜತೆಯಾಟ ನಡೆಸಿತು. ಮಿಚೆಲ್ ಅವರು ಉನಾದ್ಕತ್ ಎಸೆತ ಲೋ ಫುಲ್ಟಾಸ್ ಎಸೆತಕ್ಕೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. 7 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಮಿಚೆಲ್ 52 ರನ್ ಗಳಿಸಿದರು.
ಮಿಚೆಲ್ ವಿಕೆಟ್ ಬಿದ್ದರೂ ಕೂಡ ಚೆನ್ನೈ ತಂಡದ ರನ್ ಗಳಿಕೆಗೆ ಯಾವುದೇ ಹಿನ್ನಡೆಯಾಗಲಿಲ್ಲ. ಶಿವಂ ದುಬೆ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ನಡೆಸಿ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 19.2 ಓವರ್ ತನಕ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಗಾಯಕ್ವಾಡ್ 98 ರನ್ ಗಳಿಸಿ ವಿಕೆಟ್ ಕಳೆದುಕೊಂಡು ಕೇವಲ 2 ರನ್ ಅಂತರದಿಂದ ಶತಕ ವಂಚಿತರಾದರು. ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು. ಸತತವಾಗಿ 2ನೇ ಶತಕ ಬಾರಿಸುವ ಅವಕಾಶ ಕೈ ಚೆಲ್ಲಿದರು. ಒಟ್ಟು 54 ಎಸೆತ ಎದುರಿಸಿದ ಗಾಯಕ್ವಾಡ್ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 98 ರನ್ ಗಳಿಸಿದರು.
ಶಿವಂ ದುಬೆ 4 ಬಿಗ್ ಹಿಟ್ಟಿಂಗ್ ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿ ಅಜೇಯ 39 ರನ್ ಗಳಿಸಿದರು. ಧೋನಿ ಕೂಡ 5 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಮತ್ತು ಉನಾದ್ಕತ್ ತಲಾ ಒಂದು ವಿಕೆಟ್ ಕಿತ್ತರು.