ಮುಖ್ಯಮಂತ್ರಿ ಚಂದ್ರು ಆಪ್ ಸೇರ್ಪಡೆ

Prasthutha|

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಎಂಎಲ್ ಸಿ, ಕನ್ನಡ ಚಿತ್ರ ರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.

- Advertisement -

ಬೆಂಗಳೂರಿ ಹೋಟೆಲ್‌ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಚಂದ್ರುರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಮುಖ್ಯಮಂತ್ರಿ ಚಂದ್ರುರವರು ನಾಡು, ನುಡಿ, ಜಲಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವುಗಳ ರಕ್ಷಣೆಯು ನಮ್ಮ ಪಕ್ಷದ ಮೂಲ ಸಿದ್ಧಾಂತ ಕೂಡ ಆಗಿದೆ.. ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರಾದೇಶಿಕತೆಗೆ ಒತ್ತು ನೀಡಿ ರಾಷ್ಟ್ರದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವುದೇ ಎಎಪಿಯ ಸ್ಪಷ್ಟ ನಿಲುವು. ಸತತ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿ ನಾಟಕದ ಮೂಲಕ ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣ ಮಾಡುವ ದಿಶೆಯಲ್ಲಿ ಚಂದ್ರುರವರು ಸಾಕಷ್ಟು ಶ್ರಮಿಸಿದ್ದಾರೆ ” ಎಂದು ಹೇಳಿದರು.

“ಮುಖ್ಯಮಂತ್ರಿ ಚಂದ್ರುರವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ಗೌರಿಬಿದನೂರು ಕ್ಷೇತ್ರದ ಶಾಸಕರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗೂ ಜನರ ಭಾವನೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಹಲವು ಸರ್ಕಾರಿ ತಾಣಗಳಲ್ಲಿ ಕನ್ನಡದಲ್ಲಿಯೂ ಸೂಚನಾ ಫಲಕಗಳು ಇರುವುದರ ಹಿಂದೆ ಚಂದ್ರುರವರ ಶ್ರಮವಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

- Advertisement -

ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್‌ ರಾವ್‌ ಮಾತನಾಡಿ, “ಕನ್ನಡಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಮುಖ್ಯಮಂತ್ರಿ ಚಂದ್ರುರವರು ಕನ್ನಡ ನಾಡಿನಾದ್ಯಂತ ಆಮ್‌ ಆದ್ಮಿ ಪಾರ್ಟಿಯ ಸಾಧನೆಗಳನ್ನು ಪ್ರಚಾರ ಮಾಡಲು ಸಮ್ಮತಿ ಸೂಚಿಸಿರುವುದು ಪಕ್ಷದ ಸೌಭಾಗ್ಯ. ಎಎಪಿಯ ʻಪ್ರಚಾರ ರಾಯಭಾರಿʼ ಆಗಿ ಚಂದ್ರುರವರು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮುಂತಾದ ಕ್ಷೇತ್ರಗಳಲ್ಲಿ ದೆಹಲಿಯ ಕೇಜ್ರಿವಾಲ್‌ ಸರ್ಕಾರ ಮಾಡಿರುವ ಸಾಧನೆಯನ್ನು ಜನರಿಗೆ ತಲುಪಿಸಲಿದ್ದಾರೆ. ಚಂದ್ರುರವರ ಅನುಭವಿ ವ್ಯಕ್ತಿತ್ವವು ಪಕ್ಷದ ಸ್ವಚ್ಛ, ಪಾರದರ್ಶಕ, ಪ್ರಾಮಾಣಿಕ ಸಿದ್ಧಾಂತಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ನೆರವಾಗಲಿದೆ” ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರುರವರು ಮಾತನಾಡಿ, “ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಪ್ರಾಮಾಣಿಕರು ಅಸ್ಪೃಶ್ಯರಾಗಿದ್ದಾರೆ. ಮೂರು ಪಕ್ಷಗಳಿಂದ ರಾಜ್ಯದ ಜನತೆಗೆ ದ್ರೋಹವಾಗಿದೆ. ಮುಂದೆಯೂ ದ್ರೋಹ ಮಾಡಲು ಹವಣಿಕೆ ಮಾಡುತ್ತಿವೆ. ಎಲ್ಲ 224 ಸ್ಥಾನಗಳನ್ನು ಗೆಲ್ಲುವುದು ಆಮ್‌ ಆದ್ಮಿ ಪಾರ್ಟಿಯ ಗುರಿ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೇವಲ ವಿಸರ್ಜನೆ ಮಾಡಿದರೆ ಸಾಲದು. ಈಗಿ ಪರಿಷ್ಕರಣೆಯನ್ನು ಹಿಂಪಡೆದು, ಚುನಾವಣೆವರೆಗೂ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಬೇರೆ ಪಕ್ಷಗಳಲ್ಲಿ ಮೂಲೆಗುಂಪಾಗಿರುವ ಸಹೃದಯದಿ ಹಾಗೂ ಪ್ರಾಮಾಣಿಕರು ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಬೇಕು” ಎಂದು ಕರೆ ನೀಡಿದರು.

“ಆಮ್‌ ಆದ್ಮಿ ಪಾರ್ಟಿಯು ದೇಶದ ರಾಜಕೀಯವನ್ನು ಸರಿದಾರಿಗೆ ತರುತ್ತಿದೆ. ಬೇರೆಲ್ಲ ಪಕ್ಷಗಳು ಶಿಕ್ಷಣ – ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಿದರೆ, ಆಮ್‌ ಆದ್ಮಿ ಪಾರ್ಟಿ ಸರ್ಕಾರವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೂಲಕ ಸಮಾಜದ ಭವಿಷ್ಯವನ್ನು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಎಎಪಿ ಅಧಿಕಾರ ಬಂದು ಇಲ್ಲಿ ಕೂಡ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಮೂಡಬೇಕಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಸೇರ್ಪಡೆ ಸಮಾರಂಭದಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ವಿಜಯ್ ಶರ್ಮಾ, ಶಾಂತಲಾ ದಾಮ್ಲೆ, ಮೋಹನ್ ದಾಸರಿ, ಜಗದೀಶ್ ವಿ. ಸದಂ, ಸುರೇಶ್ ರಾಥೋಡ್, ಬಿ. ಟಿ. ನಾಗಣ್ಣ, ಜಗದೀಶ್ ಚಂದ್ರ ಸೇರಿದಂತೆ ಅನೇಕ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.



Join Whatsapp