ಹಳೇ ಉದ್ಯೋಗಿಗಳಿಂದಲೇ ಚಂದ್ರಶೇಖರ ಗುರೂಜಿ ಹತ್ಯೆ: ಸಚಿವ ಅರಗ ಜ್ಞಾನೇಂದ್ರ

Prasthutha|

ತುಮಕೂರು: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಅವರ ಹಳೇ ಉದ್ಯೋಗಿಗಳಿಂದಲೇ ನಡೆದಿದೆ. ಇದೊಂದು ಅಮಾನುಷ್ಯ ಕೃತ್ಯವಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಚಂದ್ರಶೇಖರ ಗುರೂಜಿ ಅವರು ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಹಾಗಾಗಿ ಅದೇ ದ್ವೇಷದಿಂದ ಬಂದು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು.

ಮಧುಗಿರಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಸ್ಟಾರ್ ಹೋಟೆಲ್ ನಲ್ಲಿ ಭದ್ರತಾ ವ್ಯವಸ್ಥೆ ಇರಬೇಕಿತ್ತು. ಆದರೆ ಏಕೆ ಭದ್ರತಾ ವ್ಯವಸ್ಥೆಯ ಲೋಪವಾಗಿದೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.

- Advertisement -

ಚಂದ್ರಶೇಖರ ಗುರೂಜಿಯವರ ಪರಿಚಿತರಿಂದಲೇ ಅವರ ಹತ್ಯೆ ನಡೆದಿದೆ. ನಮ್ಮ ಪೊಲೀಸರು ಘಟನೆ ನಡೆದ 2 ಗಂಟೆಗಳಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹಾಗಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

ಪಿಎಸ್ಐ ನೇಮಕಾತಿ ಹಗರಣ

ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಐಡಿ ತಂಡವನ್ನು ಅಭಿನಂದಿಸಬೇಕಿತ್ತು. ಆದರೆ ಅವರು ಅದನ್ನು ಬಿಟ್ಟ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದ ಆರಗ ಜ್ಞಾನೇಂದ್ರ, ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವಿಜಯೇಂದ್ರರವರ ಹೆಸರನ್ನು ಸಿದ್ದರಾಮಯ್ಯ ಅವರು ಯಾವುದೇ ದಾಖಲಾತಿ ಇಲ್ಲದೆ ಹೇಳುವ ಮೂಲಕ ಅವರ ಚಾರಿತ್ರ್ಯ ಹರಣ ಮಾಡಿ  ದೊಡ್ಡವರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ನಾನು ವಿರೋಧ ಪಕ್ಷದ ನಾಯಕರಿಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ನಿಮ್ಮ ಬಳಿ ಸಾಕ್ಷ್ಯಾಧಾರ ಇದ್ದರೆ ಕೊಡಿ, ನೀವು ಸಾಕ್ಷ್ಯಾಧಾರ ಕೊಟ್ಟರೂ ನಾವು ಕ್ರಮ ಕೈಗೊಳ್ಳದಿದ್ದರೆ ಆಮೇಲೆ ಮಾತನಾಡಿ. ಸುಖಾ ಸುಮ್ಮನೆ ಈ ರೀತಿ ಆಧಾರ ರಹಿತ ಆರೋಪ ಮಾಡಬೇಡಿ ಎಂದರು.

ವಿನಾ ಕಾರಣ ಆರೋಪ ಮಾಡುವ ಬದಲು ಸಾಕ್ಷ್ಯಾಧಾರ ಕೊಡಿ ಎಂದು ಹೇಳಿದರೂ ಅವರು ಸಾಕ್ಷ್ಯಾಧಾರ ಕೊಡಲು ಮಾತ್ರ ಮುಂದೆ ಬರುತ್ತಿಲ್ಲ ಎಂದು ಅವರು ದೂರಿದರು.

ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗಾದಲ್ಲಿ ಕಾಂಗ್ರೆಸ್ ಮುಖಂಡ ಆರ್.ಡಿ. ಪಾಟೀಲ್ ಎಂಬುವರನ್ನು ಮೊದಲು ಬಂಧಿಸಿದ್ದು. ಆತನೇ ಈ ಪ್ರಕರಣದ ಕಿಂಗ್ ಪಿನ್ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಎಡಿಜಿಪಿ ಕೇಡರ್ ಅಧಿಕಾರಿಗಳ ಕೈಚಳಕ ಇತ್ತು ಎಂಬ ಬಗ್ಗೆ ಸಾಬೀತಾಗಿತ್ತು. ಆಗ ಅವರೇ ಪ್ರಶ್ನೆ ಪತ್ರಿಕೆ ಹೊಂದಿಸಿ ಕೊಟ್ಟಿದ್ದರು. ಈ ಸಂಬಂಧವೂ ಸಿದ್ದರಾಮಯ್ಯನವರ ಸರ್ಕಾರ ಎಫ್ ಐಆರ್ ದಾಖಲಿಸಿತ್ತು. ಆದರೆ ಚಾರ್ಜ್ ಶೀಟ್ ಹಾಕದೆ ಸಗಣಿ ಸಾರಿಸುವ ಕೆಲಸ ಮಾಡಿದ್ದರು. ಆದರೆ ನಾವು ಅವರಂತೆ ಸಗಣಿ ಸಾರಿಸುವ ಕೆಲಸ ಮಾಡದೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗಾಗಿ ಕಾಂಗ್ರೆಸ್ ನವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸುಮ್ಮ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನಿನಲ್ಲಿ ಎಲ್ಲರೂ ಒಂದೇ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬ್ಯಾಟರಂಗೇಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಉಪವಿಭಾಗಾಧಿಕಾರಿ ಅಜಯ್ ಉಪಸ್ಥಿತರಿದ್ದರು.



Join Whatsapp