ಆ್ಯಕ್ಟೀವಾ ಸ್ಕೂಟರ್‌ಗೆ 15.44 ಲಕ್ಷ ರೂಪಾಯಿ ಮೌಲ್ಯದ ʻನಂಬರ್ ಪ್ಲೇಟ್ʼ !

Prasthutha|

ಚಂಡೀಗಢ: ಐಷಾರಾಮಿ ಕಾರುಗಳಿಗೆ ಉದ್ಯಮಿಗಳು, ಸಿನಿಮಾ ತಾರೆಯರು ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಪಡೆಯಲು ಭಾರಿ ಮೊತ್ತ ಪಾವತಿಸುವುದನ್ನು ಹಲವಾರು ಬಾರಿ ನೋಡಿದ್ದೇವೆ. ಆದರೆ ಸಾಮಾನ್ಯ ವ್ಯಕ್ತಿಯೊಬ್ಬ ತಮ್ಮ ಬಳಿಯಿರುವ  ಹಳೆಯ ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಪಡೆಯಲು ಬರೋಬ್ಬರಿ 15 ಲಕ್ಷ ರೂಪಾಯಿ ವ್ಯಯಿಸಿರುವ ಅಪರೂಪದ ಘಟನೆ ಚಂಡೀಗಢದಲ್ಲಿ ನಡೆದಿದೆ.

- Advertisement -

0001 ಸಂಖ್ಯೆಯಿಂದ ಪ್ರಾರಂಭವಾಗುವ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಚಂಡೀಗಢ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರವು ಹರಾಜಿನಲ್ಲಿಟ್ಟಿತ್ತು. ಜಾಹೀರಾತು ಸಂಸ್ಥೆಯೊಂದನ್ನು ನಡೆಸುತ್ತಿರುವ 42 ವರ್ಷ ವಯಸ್ಸಿನ ಬ್ರಿಜ್‌ ಮೋಹನ್‌, ಹರಾಜಿನಲ್ಲಿ ʻಸಿಎಚ್‌1-ಸಿಜೆ-0001ʼ ಸಂಖ್ಯೆಯನ್ನು ಬರೋಬ್ಬರಿ 15.44 ಲಕ್ಷ ರೂಪಾಯಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ, ಬ್ರಿಜ್‌ ಮೋಹನ್‌ ಸದ್ಯ ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನವನ್ನು ಹೊಂದಿದ್ದಾರೆ. ಈ ಸ್ಕೂಟರ್‌ನ ಎಕ್ಸ್‌ ಶೋರೂಮ್‌ ಬೆಲೆ 71 ಸಾವಿರ ರೂಪಾಯಿ ಮಾತ್ರವಿದೆ.

ಚಂಡೀಗಢ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಸೃಷ್ಟಿಸುವ ಉದ್ದೇಶದಿಂದ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹರಾಜು ಮಾಡುವಂತೆ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಒಟ್ಟು 378 ನೋಂದಣಿ ಸಂಖ್ಯೆಗಳ ಹರಾಜು ನಡೆದಿದ್ದು, ಒಟ್ಟು 1.5 ಕೋಟಿ ರೂಪಾಯಿ ಆದಾಯ ಗಳಿಸಿದೆ. ಸಿಎಚ್‌1-ಸಿಜೆ-0001 ಸಂಖ್ಯೆಗೆ 5 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಅಂತಿಮವಾಗಿ ಬ್ರಿಜ್‌ ಮೋಹನ್‌, 15.44 ಲಕ್ಷ ರೂಪಾಯಿ ನೀಡಿ ʻಕನಸಿನ ಸಂಖ್ಯೆʼಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಪ್ರಿಲ್14ರಿಂದ 16ರವರೆಗೆ ನಡೆದ ಫ್ಯಾನ್ಸಿ ನಂಬರ್‌ಗಳ ಹರಾಜಿನಲ್ಲಿ 4.4 ಲಕ್ಷ ರೂ.ನಿಂದ ಗರಿಷ್ಠ 30 ಲಕ್ಷ ರೂಪಾಯಿವರೆಗೂ ನೋಂದಣಿ ಸಂಖ್ಯೆಗಳು ಹರಾಜಾಗಿವೆ.

- Advertisement -

ʻದೀಪಾವಳಿಯ ಸಮಯದಲ್ಲಿ ಹೊಸ ಕಾರು ಖರೀದಿಸಲು ತೀರ್ಮಾನಿಸಿದ್ದು, ಆ ವಾಹನಕ್ಕಾಗಿ ಸಿಎಚ್‌1-ಸಿಜೆ-0001 ಸಂಖ್ಯೆಯನ್ನು ಕಾಯ್ದಿರಿಸುವುದಾಗಿ ಮೋಹನ್ ಹೇಳಿದ್ದಾರೆ. ಅದುವರೆಗೂ ಮೋಹನ್‌ ಈಗ ಬಳಸುತ್ತಿರುವ ಹೋಂಡಾ ಆಕ್ಟಿವಾದಲ್ಲಿ ಫ್ಯಾನ್ಸಿ ನೋಂದಣಿ ಸಂಖ್ಯೆ ಕಾಣಿಸಿಕೊಳ್ಳಲಿದೆ.

ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರು ಬಳಸುವ ನಾಲ್ಕು ವಾಹನಗಳು ವಾಹನಗಳು ಸೇರಿದಂತೆ ಪ್ರಸ್ತುತ ಚಂಡೀಗಢದ 179 ಸರ್ಕಾರಿ ವಾಹನಗಳು 0001 ನಂಬರ್ ಪ್ಲೇಟ್ ಅನ್ನು ಬಳಸುತ್ತಿವೆ. ಇತ್ತೀಚೆಗಷ್ಟೇ 0001 ಸಂಖ್ಯೆಗಳನ್ನು ಬಿಟ್ಟುಕೊಡಲು ಸಿಎಂ ನಿರ್ಧರಿಸಿದ್ದು, ಅವುಗಳನ್ನು ಹರಾಜು ಮಾಡುವಂತೆ ಸೂಚಿಸಿದ್ದರು.



Join Whatsapp