ಚಂಡೀಗಢ: ಪಂಜಾಬ್ ನ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್ ನಿಂದ ಆಕ್ಷೇಪಾರ್ಹ ವಿಡಿಯೋಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಬಾಲಕಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅಮಾನತುಗೊಳಿಸಿದೆ. ಅಲ್ಲದೆ ಸೆಪ್ಟೆಂಬರ್ 24ರವರೆಗೆ ವಿವಿಯನ್ನು ಮುಚ್ಚಲಾಗಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ಸೋಮವಾರ ತಿಳಿಸಿವೆ.
ಹಲವಾರು ಬಾಲಕಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ಸಹ ಹಾಸ್ಟೆಲ್ಲರ್ ಒಬ್ಬರು ರೆಕಾರ್ಡ್ ಮಾಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರಕರಣದಲ್ಲಿ ಈಗಾಗಲೇ ಪೊಲೀಸರು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಆಕೆ ವಿಡಿಯೋ ಹಂಚಿಕೊಂಡಿದ್ದ ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಶಿಮ್ಲಾದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಇದೀಗ ಪಂಜಾಬ್ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದ್ದು ಅವರ ವಿಚಾರಣೆ ಕೈಗೊಳ್ಳಲಾಗಿದೆ.
ವಿಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿನಿಯ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿಯ ಗೆಳೆಯ ಸನ್ನಿ ಮೆಹ್ತಾ ಎಂದು ಹೇಳಲಾದ ಯುವಕನೊಬ್ಬನನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ.
ಸನ್ನಿ ಮೆಹ್ತಾ ಟ್ರಾವೆಲ್ ಎಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಘಟನೆಗೆ ಸಂಬಂಧಿಸಿದಂತೆ ಶಿಮ್ಲಾದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ವ್ಯಕ್ತಿಯ ಮಾಹಿತಿ ಬಹಿರಂಗವಾಗಿಲ್ಲ.
ವಿದ್ಯಾರ್ಥಿ ನಿಲಯದಲ್ಲಿ ಸ್ನಾನ ಮಾಡುವಾಗ ವಿದ್ಯಾರ್ಥಿನಿಯರ ವೀಡಿಯೊಗಳನ್ನು ಮಾಡಿದ್ದಲ್ಲದೆ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಯಿತು. ವೀಡಿಯೊಗಳು ವೈರಲ್ ಆದ ನಂತರ, ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದ್ದಾರೆ.
ಶನಿವಾರ ರಾತ್ರಿ ಆರಂಭವಾದ ಪ್ರತಿಭಟನೆ ಭಾನುವಾರ ತಡರಾತ್ರಿಯವರೆಗೂ ಮುಂದುವರೆದಿತ್ತು.
ಪಂಜಾಬ್ ನ ಮೊಹಾಲಿಯ ಚಂಡೀಗಡ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯೊಬ್ಬರು ಇತರರ ಆಕ್ಷೇಪಾರ್ಹ ವಿಡಿಯೊಗಳನ್ನು ಚಿತ್ರಿಕರಿಸಿ ತನ್ನ ಗೆಳೆಯರಿಗೆ ಕಳುಹಿಸಿದ್ದರು ಎಂಬ ವದಂತಿ ಹರಡಿತ್ತು. ಒಬ್ಬ ವಿದ್ಯಾರ್ಥಿನಿಯು ತನ್ನ ವಿಡಿಯೊವನ್ನು ಯುವಕನೊಬ್ಬನ ಜೊತೆ ಹಂಚಿಕೊಂಡಂತೆ ಕಾಣಿಸುತ್ತಿದೆ. ಇತರ ಯಾವುದೇ ವಿದ್ಯಾರ್ಥಿನಿಯ ಆಕ್ಷೇಪಾರ್ಹವಾದ ವಿಡಿಯೊ ಸಿಕ್ಕಿಲ್ಲ ಎಂದು ಪಂಜಾಬ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಗುರ್ ಪ್ರೀತ್ ಕೌರ್ ಹೇಳಿದ್ದಾರೆ.