ಚಂಡೀಗಡ ಪಾಲಿಕೆ ಚುನಾವಣೆ: ಎಎಪಿ 14 ಕಡೆ ಗೆಲುವು, ಬಿಜೆಪಿಗೆ ಭಾರೀ ಹಿನ್ನಡೆ

Prasthutha|

ಚಂಡೀಗಡ ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿರುವ ಎಎಪಿ- ಆಮ್ ಆದ್ಮಿ ಪಕ್ಷವು ಈಗಾಗಲೇ 14 ವಾರ್ಡ್ ಗಳಲ್ಲಿ ಜಯ ಗಳಿಸಿದ್ದರೆ ಕೆಲ ಕಡೆ ಮುನ್ನಡೆ ಗಳಿಸಿರುವುದಾಗಿ ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ. ಎಣಿಕೆ ಕಾರ್ಯ ಮುಂದುವರಿದಿದೆ.

- Advertisement -

ಭಾರತೀಯ ಜನತಾ ಪಕ್ಷವು 10 ಕಡೆ ಗೆದ್ದಿದೆ ಎಂದೂ ಚುನಾವಣಾ ಆಯೋಗದ ದತ್ತಾಂಶ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಪಕ್ಷವು 5 ಕಡೆ ಗೆಲುವು ಸಾಧಿಸಿದೆ; ಶಿರೋಮಣಿ ಅಕಾಲಿ ದಳವು ಒಂದು ಕಡೆ ಗೆದ್ದಿದೆ.  

- Advertisement -

ಬಿಜೆಪಿಯ ಮೇಯರ್ ರವಿಕಾಂತ್ ಶರ್ಮಾ ಅವರು ಎಎಪಿಯ ದಮನ್ ಪ್ರೀತ್ ಕೈಯಲ್ಲಿ 17ನೇ ವಾರ್ಡ್ ನಲ್ಲಿ 889 ಮತಗಳಿಂದ ಸೋಲುಂಡಿದ್ದಾರೆ.  ವಾರ್ಡ್ ನಂಬರ್ 21ರಲ್ಲಿ ಮಾಜಿ ಮೇಯರ್ ಬಿಜೆಪಿಯ ದೇವೆಸ್ಗ್ ಮುದ್ಗಿಲ್ ರನ್ನು ಎಎಪಿಯ ಜಸ್ಬೀರ್ ಅವರು 939 ಮತಗಳಿಂದ ಸೋಲಿಸಿದರು.

ಐದು ವರುಷಕ್ಕೊಮ್ಮೆ ನಡೆಯುವ ಚಂಡೀಗಢ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇತ್ತು. ಈ ಬಾರಿ ಆಮ್ ಆದ್ಮಿ ಪಕ್ಷ ಪ್ರವೇಶಿಸಿರುವುದರಿಂದ ತ್ರಿಕೋನ ಪೈಪೋಟಿ ಕಂಡುಬಂದಿದೆ. ಪಂಜಾಬ್ ವಿಧಾನ ಸಭೆ ಲೋಕ ಸಭೆ ಚುನಾವಣೆಗಳಲ್ಲಿ ಎಎಪಿ ಈಗಾಗಲೇ ತನ್ನ ಇರುವಿಕೆ ತೋರಿಸಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಅದರ ಜೊತೆಗಿದ್ದ ಶಿರೋಮಣಿ ಅಕಾಲಿ ದಳ ಒಂದು ಕಡೆ ಜಯಿಸಿತ್ತು. ಕಾಂಗ್ರೆಸ್ 4 ಕಡೆ ಗೆದ್ದಿತ್ತು.

ಶುಕ್ರವಾರ ಚಂಡೀಗಡ ಮನಪಾಕ್ಕೆ ಚುನಾವಣೆ ನಡೆದಿದ್ದು, 3 ಲಕ್ಷದಷ್ಟು ಮಹಿಳೆಯರ ಸಹಿತ 6.3 ಲಕ್ಷ ಮತದಾರರಿರುವ ಇಲ್ಲಿ 60% ಮತದಾನ ಆಗಿತ್ತು.

16ನೇ ವಾರ್ಡ್ ನಲ್ಲಿ ಅತಿ ಹೆಚ್ಚು 72.81% ಹಾಗೂ 23ನೇ ವಾರ್ಡ್ ನಲ್ಲಿ ಅತಿ ಕಡಿಮೆ 42.66% ಮತದಾನ ಆಗಿತ್ತು.



Join Whatsapp