ಒಕ್ಕಲಿಗ ಸ್ವಾಮೀಜಿ ಹೇಳಿಕೆಗೆ ಚಲುವರಾಯಸ್ವಾಮಿ, ರಾಜಣ್ಣ, ದಿನೇಶ್ ಗುಂಡೂರಾವ್ ಅಸಮಾಧಾನ

Prasthutha|

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಟ್ಟು, ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒಕ್ಕಲಿಗ ಮಠದ ಚಂದ್ರಶೇಖರ ಸ್ವಾಮೀಜಿಯ ಹೇಳಿಕೆಗೆ ಸಿದ್ದು ಆಪ್ತ ಬಣದ ಶಾಸಕರು, ಸಚಿವರು ಗರಂ ಆಗಿದ್ದಾರೆ.

- Advertisement -

ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿ, ಸ್ವಾಮೀಜಿ ಅವ್ರ ಸ್ಥಾನ ಬಿಟ್ಟು ಕೊಡ್ತಾರಾ? ಬಿಟ್ಟು ಕೊಟ್ರೆ ನಾನೇ ಕಾವಿ ಧರಿಸಿ, ಸ್ವಾಮೀಜಿ ಆಗ್ತೀನಿ ಎಂದು ಸವಾಲು ಹಾಕಿದ್ದಾರೆ.

ಇದೇ ವಿಚಾರಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಇದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಯಾವುದೇ ಗೊಂದಲಗಳಿಲ್ಲದೆ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ನಮ್ಮಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲ ಹೇಳಿದ್ದಾರೆ. ಚಂದ್ರಶೇಖರ ಸ್ವಾಮೀಜಿಗಳ ಹೇಳಿಕೆ ವೈಯಕ್ತಿಕ. ದೊಡ್ಡ ವಿಚಾರವಲ್ಲ ಎಂದಿದ್ದಾರೆ.

- Advertisement -

ವಿಜಯಪುರದಲ್ಲಿ ಇದೇ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಪಕ್ಷದ ಆಂತರಿಕ ವಿಚಾರ. ಒಬ್ಬರು ಮುಖ್ಯಮಂತ್ರಿ ಇರೋವಾಗ ಆ ರೀತಿ ಮಾತನಾಡೋದು ಅಪ್ರಸ್ತುತ. ಮುಖ್ಯಮಂತ್ರಿ ವಿಚಾರ ಸಿರಿಯಸ್ ಇಶ್ಯೂ ಆಗಿದೆ. ಶ್ರೀಗಳು ಏನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅತ್ಯಂತ ಅನುಭವಿಗಳು ಇದ್ದಾರೆ. ಅಲ್ಲದೇ ಅವರು ದಕ್ಷ ಆಡಳಿತಗಾರರಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡೋದು ಸರಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳು ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ? ಶಾಮನೂರು

ಈ ಕುರಿತು ಶಾಮನೂರು ಶಿವಶಂಕರಪ್ಪ, ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸ್ವಾಮೀಜಿಯವರು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಸ್ವಾಮೀಜಿಗಳು ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ? ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ನಾವು ಹೇಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.

Join Whatsapp