ಬೆಂಗಳೂರು: ಚೈತ್ರಾ ಕುಂದಾಪುರ ಮತ್ತು ತಂಡ ಎಸಗಿದ ವಂಚನೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಅಭಿನವ ಹಾಲಶ್ರೀ ತನಿಖೆ ಆರಂಭಿಸಿದ ತನಿಖಾಧಿಕಾರಿಗಳು ಮತ್ತಷ್ಟು ಮಂದಿಗೆ ನೋಟಿಸ್ ಜಾರಿ ಮಾಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಅವರನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ತನಿಖಾಧಿಕಾರಿಗಳು, ಸ್ವಾಮೀಜಿ ಕಡೆಯಿಂದ ಹಣ ಜಪ್ತಿ ಮಾಡುವ ಹಿನ್ನೆಲೆ ಕರೆದುಕೊಂಡು ಹೋಗಿದ್ದರು. ಇದರ ನಡುವೆ ಹಲವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಹಾಲಶ್ರೀ ಆಪ್ತರಾಗಿರುವ ತಿಪ್ಪೇಸ್ವಾಮಿ, ಲಕ್ಷ್ಮಣ ಮತ್ತು ಪ್ರಣವ್ ಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಚೈತ್ರಾ ಆಪ್ತನಾದ ಮಂಜು ಎಂಬಾತನಿಗೂ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲರಿಗೂ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಚೈತ್ರಾ ಅಂಡ್ ಗ್ಯಾಂಗ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಹಾಲಶ್ರೀ ಈಗ ಸಿಸಿಬಿ ಕಸ್ಟಡಿಗೆ ಸಿಕ್ಕಿದ್ದು, ಮತ್ತೊಂದೆಡೆ ವಿಚಾರಣೆಗೆ ಸ್ಪಂದಿಸಿದೇ ಆಸ್ಪತ್ರೆ ಸೇರಿದ್ದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಆಗಿದೆ. ಹೀಗಾಗಿ ಪ್ರಕರಣದ ತನಿಖೆಯ ಅಸಲಿ ಆಟ ಈಗ ಶುರುವಾಗಲಿದೆ.
ಹಾಲಾಡಿ ಮಠದಲ್ಲಿ ಸ್ಥಳ ಮಹಜರು
ಅಭಿನವ ಹಾಲಶ್ರೀ ಅವರನ್ನು ವಿಜಯನಗರದ ಹೂವಿನಹಡಗಲಿ ತಾಲೂಕಿನ ಹಿರೆಗಡಗಲಿಯ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ನಿನ್ನೆ ರಾತ್ರಿ ಎರಡು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಲಾಯಿತು. ಕುಟುಂಬಸ್ಥರನ್ನು ಹೊರಗಿಟ್ಟು ಹಾಲಶ್ರೀ ಸ್ವಾಮಿಜಿಯನ್ನೊಬ್ಬರನ್ನೆ ರೂಂನಲ್ಲಿ ಮಹಜರು ನಡೆಸಲಾಗಿದೆ. ನಂತರ ಸ್ವಾಮೀಜಿ ಜೊತೆ ಮಾತನಾಡಬೇಕು ಎಂದು ಸಿಸಿಬಿ ಪೊಲೀಸರಲ್ಲಿ ಕುಟುಂಬಸ್ಥರು ಮನವಿ ಮಾಡಿದ್ದರು. ಆದರೆ ಇಲ್ಲೇ ಮಾತನಾಡಿ ಅಂತಾ ಹೊರಗಡೆ ಮಾತಾಡಲು ಬಿಟ್ಟಿದ್ದಾರೆ. ಈ ವೇಳೆ ಕುಟುಂಬಸ್ಥರು ಏನೇ ಮಾತನಾಡಿದರೂ ಶ್ರೀಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಊಟ ಮಾಡಿ ಹೋಗಿ ಅಂತ ಕುಟುಂಬಸ್ಥರು ಮನವಿ ಮಾಡಿದರು. ನಾವು ಯಾರೂ ಊಡ ಮಾಡಲ್ಲ ನಮ್ಮದು ಊಟ ಆಗಿದೆ ಅಂತಾ ಹೇಳಿ ಹಾಲಶ್ರೀ ಅವರನ್ನು ಮಹಜರು ಮಾಡಿ ತನಿಖಾಧಿಕಾರಿಗಳು ಕರೆದುಕೊಂಡು ಹೋದರು.
ಹಾಲಶ್ರೀ ತಂದೆ ಸೇರಿದಂತೆ ಒಟ್ಟು ನಾಲ್ಕು ಜನ ಚಿಕ್ಕಪ್ಪಂದಿರು ಹಾಲಾಡಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೆ ತನ್ನ ಅಕ್ಕನ ಮಗಳನ್ನೇ ಹಾಲಶ್ರೀ ವಿವಾಹ ಆಗಿದ್ದರು. ಎರಡು ವರ್ಷದ ಹಿಂದೆ ಹಾಲಶ್ರೀ ತಾಯಿ ನಿಧನ ಹೊಂದಿದ್ದಾರೆ. ತಂದೆ ಹಾಗೂ ಪತ್ನಿಯ ಜೊತೆ ಹಾಲಶ್ರೀ ಮಠದಲ್ಲಿಯೇ ಪ್ರತ್ಯೇಕವಾಗಿ ಇರುತ್ತಿದ್ದರು. ನಿನ್ನೆ ತಂದೆ ಹಾಗೂ ಪತ್ನಿ ಮಾತನಾಡಲು ಮುಂದಾದರೂ ಪ್ರತಿಕ್ರಿಯೆ ನೀಡದೆ ಹಾಲಶ್ರೀ ತೆರಳಿದ್ದಾರೆ ಎಂದು ತಿಳಿದುಬಂದಿದೆ.