ನವದೆಹಲಿ: ತಮ್ಮ ವೈಯಕ್ತಿಕ ಪಾತ್ರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ದೋಷಾರೋಪಗಳು ಇಲ್ಲದಿದ್ದಾಗ ಕಂಪೆನಿ ಅಪರಾಧಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಮುಂತಾದ ಕಂಪೆನಿ ಅಧಿಕಾರಿಗಳನ್ನು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ತೀರ್ಪು ನೀಡಿದೆ.
ರವೀಂದ್ರನಾಥ್ ಬಜ್ಪೆ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಕಂಪೆನಿಯ ನಿರ್ದೇಶಕರಂತಹ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಪರಿಗಣಿಸಲು ಅರ್ಹವಾಗಿರುವ ಬಗ್ಗೆ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಅವರು ನಿರ್ವಹಿಸಿದ ಅನಿವಾರ್ಯ ಪಾತ್ರದ ಬಗ್ಗೆ ನ್ಯಾಯಾಧೀಶರು ತಮ್ಮ ಸಮ್ಮತಿ ದಾಖಲಿಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ತಿಳಿಸಿದೆ.
“ಯಾವುದೇ ನಿರ್ದಿಷ್ಟ ಪಾತ್ರವಿಲ್ಲದ, ತಮ್ಮ ಅಧಿಕಾರ ಸಾಮರ್ಥ್ಯದಡಿ ಯಾವುದೇ ಪಾತ್ರ ವಹಿಸದ ಆಪಾದಿತ ಕಂಪನಿಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು/ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು/ಅಥವಾ ಉಪ ಪ್ರಧಾನ ವ್ಯವಸ್ಥಾಪಕರು ಮತ್ತು/ಅಥವಾ ಯೋಜಕರು/ಮೇಲ್ವಿಚಾರಕರನ್ನು ಆರೋಪಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಇನ್ನೂ ನಿರ್ದಿಷ್ಟವಾಗಿ, ಕಂಪನಿ ಮಾಡಿದ ಅಪರಾಧಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರೊಂದಿಗೆ ಆರೋಪಿತ ಪ್ರತಿವಾದಿಗಳ ವಿರುದ್ಧ ಸಮನ್ಸ್ ನೀಡುವ ಮ್ಯಾಜಿಸ್ಟ್ರೇಟ್ ಆದೇಶ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಮತ್ತು ಸೆಷನ್ಸ್ ಕೋರ್ಟ್ ತೀರ್ಪನ್ನು ಅದು ಎತ್ತಿಹಿಡಿಯಿತು.
ಯಾವುದೇ ಕಾನೂನುಬದ್ಧ ಅಧಿಕಾರ ಮತ್ತು ಹಕ್ಕು ಇಲ್ಲದೆ ತಮಗೆ ಸೇರಿದ ವರ್ಗೀಕೃತ ಆಸ್ತಿಯ ಕೆಳಗೆ ಪೈಪ್ಲೈನ್ ಹಾಕುವ ಸಾಮಾನ್ಯ ಉದ್ದೇಶದೊಂದಿಗೆ ಆರೋಪಿಗಳು ಪಿತೂರಿ ನಡೆಸಿದ್ದರು ಎಂದು ದೂರುದಾರರು ಆರೋಪಿಗಳ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಅಲ್ಲದೆ ತಮ್ಮ ವರ್ಗೀಕೃತ ಆಸ್ತಿಯನ್ನು ಅತಿಕ್ರಮಿಸಿದ ಆರೋಪಿಗಳು ಕಾಂಪೌಂಡ್ ಗೋಡೆ ಹಾಗೂ ಆವರಣದಲ್ಲಿದ್ದ ಮರಗಳನ್ನು ಕೆಡವಿಹಾಕಿದರು ಎಂದು ಆರೋಪಿಸಿದ್ದರು.
ಪ್ರಕರಣದಲ್ಲಿ ಆರೋಪಿ ನಂ 1 ಮತ್ತು ನಂ 6 ಕಂಪೆನಿಗಳಾಗಿದ್ದರೆ ನಂ 2ರಿಂದ 5 ಮತ್ತು 7 ರಿಂದ 13 ರವರೆಗಿನ ಆರೋಪಿಗಳು ಕಂಪೆನಿಯ ಉನ್ನತ ಅಧಿಕಾರಿಗಳು ಅಥವಾ ಉದ್ಯೋಗಿಗಳಾಗಿದ್ದಾರೆ. ಫಿರ್ಯಾದಿದಾರರ ಆಸ್ತಿಗೆ ಹಾನಿ ಮಾಡುವ ಮೂಲಕ ಪೈಪ್ ಲೈನ್ ಹಾಕುವ ಉದ್ದೇಶ ಪ್ರತಿಯೊಬ್ಬ ಆರೋಪಿಗೆ ಇತ್ತು ಎಂದು ವಾದಿಸಲಾಯಿತು. ಆ ಉದ್ದೇಶದಿಂದ, ಅವರು ಕ್ರಿಮಿನಲ್ ಅತಿಕ್ರಮಣ ಮಾಡಿದ್ದು ಹಾನಿಗೆ ಕಾರಣರಾಗಿದ್ದಾರೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ದೂರುದಾರರು ಒತ್ತಾಯಿಸಿದ್ದರು.
ಮಂಗಳೂರಿನ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಸೆಪ್ಟೆಂಬರ್ 24, 2013ರಂದು ಆದೇಶ ನೀಡಿ ಎಲ್ಲಾ ಆರೋಪಿಗಳ ವಿರುದ್ಧ ಅಂದರೆ ನಂ 1 ರಿಂದ 13ರವರೆಗಿನ ಎಲ್ಲಾ ಆರೋಪಿಗಳ ವಿರುದ್ಧ ಸೆಕ್ಷನ್ 427 (ಆಸ್ತಿಗೆ ನಷ್ಟ ಉಂಟುಮಾಡುವ ದುಷ್ಕೃತ್ಯ), 447 (ಕ್ರಿಮಿನಲ್ ಅತಿಕ್ರಮಣ), 506 (ಕ್ರಿಮಿನಲ್ ಬೆದರಿಕೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿತ್ತು.
ನಂ 1ರಿಂದ 9ರವರೆಗಿನ ಆರೋಪಿಗಳು ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸೆಷನ್ಸ್ ನ್ಯಾಯಾಲಯ ಅನುಮತಿಸಿತಲ್ಲದೆ ಆರೋಪಿ ನಂಬರ್ 1ರಿಂದ 8ರವರೆಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ತಳ್ಳಿ ಹಾಕಿತು. 9ನೇ ಆರೋಪಿಗೆ ಸಂಬಂಧಿಸಿದ ಆದೇಶವನ್ನು ಮನ್ನಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ದೃಢೀಕರಿಸಿತ್ತು. ಪರಿಣಾಮ ದೂರುದಾರರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.
ತಮ್ಮ ಆಸ್ತಿಯ ಅಡಿಯಲ್ಲಿ ಪೈಪ್ಲೈನ್ ಹಾಕಲು ಸಹ-ಆರೋಪಿಗಳೊಂದಿಗೆ ನಂ 1ರಿಂದ 8ರವರೆಗಿನ ಆರೋಪಿಗಳು ಸಂಚು ರೂಪಿಸಿದ್ದರು ಎಂದು ದೂರಿನಲ್ಲಿ ನಿರ್ದಿಷ್ಟ ಆರೋಪವಿದೆ ಎಂದು ದೂರುದಾರರು ವಾದಿಸಿದ್ದರು. ಆದ್ದರಿಂದ ಪ್ರಕ್ರಿಯೆ/ಸಮನ್ಸ್ ನೀಡುವ ಹಂತದಲ್ಲಿ, ಆರೋಪಿಗೆ ಸಮನ್ಸ್ ನೀಡಿರುವ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಸಂಬಂಧಿಸಿದಂತೆ ಪರಿಶೀಲನಾ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಕಂಪೆನಿಗಳ ನಿರ್ವಾಹಕರಾಗಿರುವುದರಿಂದ ಎಲ್ಲಾ ಕಾರ್ಯ ನಿರ್ವಾಹಕರು ಕೂಡ ಕೃತ್ಯಕ್ಕೆ ಜವಾಬ್ದಾರರು ಎಂದು ತಿಳಿಸಲಾಗಿತ್ತು.
ಮತ್ತೊಂದೆಡೆ ಆರೋಪಿಗಳು ‘ತಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೆವು ಎಂಬ ನಂಬಲರ್ಹವಲ್ಲದ ಹೇಳಿಕೆಗಳನ್ನು ಹೊರತುಪಡಿಸಿ ಯಾವುದೇ ಪಾತ್ರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲ” ಎಂದು ಸುಪ್ರೀಂಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದರು.
ಅಂತೆಯೇ ಸುನೀಲ್ ಭಾರತಿ ಮಿತ್ತಲ್ ಮತ್ತು ಸಿಬಿಐ ನಡುವಣ ಪ್ರಕರಣ, ಮಕ್ಸೂದ್ ಸಯ್ಯದ್ ಮತ್ತು ಗುಜರಾತ್ ಸರ್ಕಾರ ಹಾಗೂ ಜಿಎಚ್ ಸಿಎಲ್ ಎಂಪ್ಲಾಯೀಸ್ ನಡುವಣ ಪ್ರಕರಣ, ಸ್ಟಾಕ್ ಆಪ್ಶನ್ ಟ್ರಸ್ಟ್ ಮತ್ತು ಇಂಡಿಯಾ ಇನ್ಫೋಲಿನ್ ಲಿಮಿಟೆಡ್ ಪ್ರಕರಣಗಳಲ್ಲಿ ನೀಡಲಾದ ತೀರ್ಪುಗಳನ್ನು ಆಧರಿಸಿ ನ್ಯಾಯಾಲಯ ಆರೋಪಿಗಳ ವಾದವನ್ನು ಮನ್ನಿಸಿತು.
“ದೂರಿನಲ್ಲಿರುವ ಅವ್ಯವಹಾರಗಳು ಮತ್ತು ಆಪಾದನೆಗಳನ್ನು ನೋಡಿದರೆ, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಕಾರ್ಯನಿರ್ವಾಹಕ ನಿರ್ದೇಶಕರು, ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಯೋಜಕರು ಮತ್ತು ನಿರ್ವಾಹಕರಾಗಿ ಅವರುಗಳು ನಿರ್ವಹಿಸಿದ ಪಾತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಆರೋಪ ಮತ್ತು ಅಥವಾ ದೋಷಗಳಿಲ್ಲ,” ನ್ಯಾಯಾಲಯ ಹೇಳಿದೆ.
2 ರಿಂದ 5 ಮತ್ತು 7 ಮತ್ತು 8 ರ ಪ್ರತಿವಾದಿಗಳ ಸಂಖ್ಯೆ ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು/ಕಾರ್ಯನಿರ್ವಾಹಕ ನಿರ್ದೇಶಕರು/ಉಪ ಪ್ರಧಾನ ವ್ಯವಸ್ಥಾಪಕರು/ಯೋಜಕರು ಮತ್ತು ನಿರ್ವಾಹಕರಾಗಿದ್ದ ಮಾತ್ರಕ್ಕೆ ಅವರ ವಿರುದ್ಧ ವೈಯಕ್ತಿಕ ಪಾತ್ರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಆರೋಪ ಮತ್ತು ದೋಷ ಇಲ್ಲದಿದ್ದರೆ ತಂತಾನೇ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
.”ಮರುಪರಿಶೀಲನಾ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ಹೈಕೋರ್ಟ್ ತಿರಸ್ಕರಿಸಿದ್ದು ಸೆಷನ್ಸ್ ಕೋರ್ಟ್ ರವಾನಿಸಿದ ಆದೇಶವನ್ನು ಸೂಕ್ತ ರೀತಿಯಲ್ಲಿ ದೃಢಪಡಿಸಿದೆ. ಪ್ರತಿವಾದಿಗಳ ಸಂಖ್ಯೆ 1 ರಿಂದ 8 ರವರೆಗೆ ಮ್ಯಾಜಿಸ್ಟ್ರೇಟ್ ನೀಡಿದ ಆದೇಶವನ್ನು ಬದಿಗಿರಿಸಿದೆ” ಎಂದು ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿಗಳು ತಿಳಿಸಿದರು.
ಆರೋಪಿಗಳ ಪರವಾಗಿ ವಕೀಲರಾದ ನಿಶಾಂತ್ ಪಾಟೀಲ್ ಮತ್ತು ಪಿ ಪಿ ಹೆಗ್ಡೆ ಹಾಜರಾದರೆ ಮೂಲ ದೂರುದಾರರ ಪರವಾಗಿ ವಕೀಲ ಶೈಲೇಶ್ ಮಡಿಯಾಲ್ ಹಾಜರಾದರು.
(ಕೃಪೆ: ಬಾರ್ & ಬೆಂಚ್)