ಮಂಗಳೂರು : ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡ ಬಿಎಡ್ ಮೂರನೇ ಸೆಮಿಸ್ಟರ್ ನಲ್ಲಿ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿರುವ ಪಠ್ಯಪುಸ್ತಕದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ , ಪ್ರವಾದಿ ಮುಹಮ್ಮದ್ (ಸ) ರವರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಕಾರಿಯಾಗಿ ಬರೆದಿರುವ ಲೇಖಕ ಬಿ.ಆರ್. ರಾಮಚಂದ್ರಯ್ಯರವರ ವಿರುದ್ಧ ಕ್ರಮಕೈಗೊಳ್ಳುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದೆ.
ಮಂಗಳೂರು ನಗರ ಜಿಲ್ಲಾ ಸಮಿತಿಯು ಪಾಂಡೇಶ್ವರ ಮತ್ತು ಬಂದರು ಠಾಣೆಗಳಿಗೆ ತೆರಳಿದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಭಾನುವಾರ ದೂರು ನೀಡಿದರು.
ತುಮಕೂರಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಬಿ.ಆರ್ ರಾಮಚಂದ್ರಯ್ಯ ಎಂಬವರು ಬರೆದಿರುವ ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿರುವ “ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಶನ್” ಎಂಬ ಆಂಗ್ಲ ಕೃತಿಯಲ್ಲಿ ಇಸ್ಲಾಂ, ಮುಸ್ಲಿಮರನ್ನು ಮತ್ತು ಪ್ರವಾದಿ ಮುಹಮ್ಮದ್ (ಸ) ರವರನ್ನು ನಿಂದಿಸಲಾಗಿದೆ. ಈ ಕೃತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಕೂಡ ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕವಾಗಿ ಆಯ್ಕೆಮಾಡಿಕೊಂಡಿದೆ.
ಉದ್ದೇಶಪೂರ್ವಕರಾಗಿ ಕೋಮುಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಲೇಖಕ ಹಾಗೂ ಪ್ರಕಾಶಕರ ವಿರುಧ್ದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ವಿರುದ್ಧ ಕ್ರಮಕೈಗೊಳ್ಳಬೇಕು, ತಕ್ಷಣ ಪಠ್ಯಪುಸ್ತಕವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿ ಮುಖಂಡರು ಎಚ್ಚರಿಸಿದ್ದಾರೆ.