ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನಲ್ಲಿ ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಮೇಲಿನ ದಾಳಿ ಹಾಗೂ ಬಂಧಿತ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಿದ ಪೋಲಿಸರ ನಡೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಎಫ್ಐ ಜಿಲ್ಲಾ ಮುಖಂಡ ಅಶ್ಫಾಕ್ ಬಂಟ್ವಾಳ ಮಾತನಾಡಿ, “ಜಿಲ್ಲೆಯ ಪೋಲಿಸರು ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಸಂಘಪರಿವಾರದ ಗೂಂಡಾಗಳ ಪರವಾಗಿ ಜಿಲ್ಲೆಯ ಪೋಲಿಸರು ನಿಂತಿರುವಂತಹದ್ದು ಖಂಡನೀಯ. ಜಿಲ್ಲೆಯ ವಿದ್ಯಾರ್ಥಿ ಸಮೂಹವನ್ನು ಸೇರಿಸಿ ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ” ಎಂದರು.
ಜಿಲ್ಲಾ ನಾಯಕಿ ಗೌಸಿಯಾ ಮಾತನಾಡಿ, ಪದೇ ಪದೇ ಸಂಘಪರಿವಾರ ಜಿಲ್ಲೆಯ ಶಾಂತಿಯನ್ನು ಕದಡುತ್ತಿದೆ, ಇದಕ್ಕೆ ಜಿಲ್ಲೆಯ ಪೋಲಿಸರ ಮೌನವೇ ಕಾರಣ , ಇಂದು ಜಿಲ್ಲೆಯ ವಿದ್ಯಾರ್ಥಿಗಳು ಭಯದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ತಕ್ತಪಡಿಸಿದರು.
ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ಸರಫುದ್ದೀನ್, ಕಾರ್ಯದರ್ಶಿ ಮುನೀರ್ ಬಜಾಲ್, ಜಿಲ್ಲಾ ಮುಖಂಡ ಉಸಾಮ, ಅಶ್ರಫ್ ಪೊರ್ಕೊಡಿ, ಮುಖಂಡರಾದ ರಿಯಾಝ್ ಅಂಕತ್ತಡ್ಕ, ಫಯಾಝ್ ವಿಟ್ಲ, ಐಮಾನ್ ಬಂಟ್ವಾಳ , ಅಫ್ರಾ ಮತ್ತಿತರರು ಉಪಸ್ಥಿತರಿದ್ದರು.