ಅತಿಕುರ್ ರಹ್ಮಾನ್ ಕಸ್ಟಡಿ ಕೊಲೆಯಾಗುವ ಸಾಧ್ಯತೆ | ನ್ಯಾಯಾಲಯ ಮಧ್ಯ ಪ್ರವೇಶಿಸಲು ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ವಿಧ್ಯಾರ್ಥಿ ಸಂಘಟನೆಯ ನಾಯಕ ಅತಿಕುರ್ ರಹ್ಮಾನಿಗೆ ಸೂಕ್ತ ವೈದ್ಯಕೀಯ ಸೇವೆ ನೀಡದಿದ್ದರೆ ಅವರು ಜೈಲಿನಲ್ಲಿಯೇ ಸಾಯುವ ಸಾಧ್ಯತೆಯಿದೆಯೆಂದು ನವದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿ.ಎಫ್.ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಶ್ವಾನ್ ಸಾದಿಕ್ ತಿಳಿಸಿದ್ದಾರೆ. ಈ ಕುರಿತು ನ್ಯಾಯಾಲಯ ಈ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ಅತಿಕುರ್ ರಹ್ಮಾನ್ ಅವರನ್ನು ಜೈಲಿನಲ್ಲಿಯೇ ಕೊಲ್ಲುವ ಯೋಜನೆ ಹಾಕಿಕೊಲ್ಲಲಾಗಿದೆ ಎಂದು ಆರೋಪಿಸಿದರು.

- Advertisement -

ಕಳೆದ ನಾಲ್ಕು ದಿನಗಳಿಂದ ಅವರನ್ನು ಜೈಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಹೃದಯ ರೋಗದಿಂದ ಬಳಲುತ್ತಿದ್ದಾರೆ. ಅವರ ಹೃದಯ ಶಸ್ತ್ರಚಿಕಿತ್ಸೆಗೆ ನಿಗದಿಯಾಗಿದ್ದ ಒಂದು ತಿಂಗಳ ಮುಂಚೆ ಅವರನ್ನು ಬಂಧಿಸಲಾಗಿದೆ. ನಂತರ ಕಾರಾಗೃಹದ ಅಧಿಕಾರಿಗಳು ಇದುವರೆಗೆ ಯಾವುದೇ ವೈದ್ಯಕೀಯ ನೆರವನ್ನು ನೀಡಲಿಲ್ಲ. ಈ ನಿರ್ಲಕ್ಷ್ಯವು ಅವರ ಜೀವನಕ್ಕೆ ಮಾರಕವಾಗಬಹುದು ಎಂದು ಅತಿಕುರ್ ರಹ್ಮಾನ್ ಅವರ ಪತ್ನಿ ಸಂಜಿದಾ ರೆಹಮಾನ್ ಹೇಳಿದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಶ್ವಾನ್ ಸಾದಿಕ್ ಈ ಬಂಧನವನ್ನು ರಾಜಕೀಯ ವೈಷಮ್ಯದ ಉದ್ದೇಶವಾಗಿ ಮಾಡಲಾಗಿದೆ ಎಂದು ಹೇಳಿದರು. ರಹ್ಮಾನ್ ಅವರು ಸಿ.ಎ.ಎ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ರಾಜಕೀಯ ಪಿತೂರಿಯ ಹಿನ್ನೆಲೆಯಲ್ಲಿ ಅವರನನ್ನು ಬಂಧಿಸಲಾಗಿದೆಯೆಂದು ಸಾದಿಕ್ ಆರೋಪಿಸಿದರು. ಹತ್ರಾಸ್ ಪ್ರಕರಣವು ಹೋರಾಟಗಾರರನ್ನು ಮೌನಗೊಳಿಸಲು ಹೆಣೆದ ನಕಲಿ ಕಥೆಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕೂಡಲೇ ಮಧ್ಯಪ್ರವೇಶಿಸಿ ವೈದ್ಯಕೀಯ ನೆರವಿಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆಗಾಗಿ ಆತನಿಗೆ ಜಾಮೀನು ನೀಡಬೇಕು ಎಂದು ಅವರು ಆಗ್ರಹಿಸಿದರು.

- Advertisement -

ಜೀವನ ಮತ್ತು ಸ್ವಾತಂತ್ರ್ಯದ ಖಾತರಿ ನಮ್ಮ ಸಂವಿಧಾನ ನೀಡುವ ಹಕ್ಕುಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿ ಶಿಕ್ಷೆಗೊಳಗಾಗಿದ್ದರೂ ಕೂಡ ಆತನ ಹಕ್ಕುಗಳನ್ನು ನಿರಾಕರಿಸುವ ಅಧಿಕಾರ ಯಾರಿಗೂ ಇಲ್ಲ. ಆತನ ವೈದ್ಯಕೀಯ ಸ್ಥಿತಿಯನ್ನು ಉಲ್ಲೇಖಿಸಿ ನಾವು ನಾಲ್ಕು ಬಾರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದೇವೆ. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದು ಆತಿಕುರ್ ವಕೀಲ ಮಧುವನ್ ದತ್ ಚತುರ್ವೇದಿ ಮಾಧ್ಯಮಗಳಿಗೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅತಿಕುರ್ ರಹ್ಮಾನ್ ಅವರ ಪತ್ನಿ ಸಂಜಿದಾ, ಚಿಕ್ಕಪ್ಪ ಶೌಕತ್ ಅಲಿ, ವಕೀಲ ಮಧುವನ್ ದತ್ ಚತುರ್ವೇದಿ ಅವರು ಉಪಸ್ಥಿತರಿದ್ದರು.

Join Whatsapp