ಕಾವೇರಿ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಹಿನ್ನಡೆ: ಎಂ.ಲಕ್ಷ್ಮಣ್ ಆರೋಪ

Prasthutha|

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮೋಸ ಹಾಗೂ ಕರ್ನಾಟಕ ಬಿಜೆಪಿ ನಾಯಕರ ಹೇಡಿತನದಿಂದ ಕರ್ನಾಟಕಕ್ಕೆ ಹಿನ್ನಡೆಯಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

- Advertisement -

ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮೋಸ ಹಾಗೂ ಕರ್ನಾಟಕ ಬಿಜೆಪಿ ನಾಯಕರ ಹೇಡಿತನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಕೆಆರ್ಎಸ್ ನೀರಿನ ಮಟ್ಟ 97 ಅಡಿ ಇದೆ. 5.10 ಟಿಎಂಸಿ ನೀರು ಕಬಿನಿಯಲ್ಲಿ, ಹಾರಂಗಿಯಲ್ಲಿ 7.54, ಹೇಮಾವತಿಯಲ್ಲಿ 18 ಟಿಎಂಸಿ ನೀರು ಲಭ್ಯವಿದ್ದು ಒಟ್ಟು 43.19 ಟಿಎಂಸಿ ನೀರಿದೆ. ಡೆಡ್ ಸ್ಟೋರೇಜ್ 12 ಟಿಎಂಸಿ ಇದೆ ಎಂದು ಗಮನಸೆಳೆದರು.

ಕೆ.ಆರ್‌ಎಸ್ ಅಣೆಕಟ್ಟಿನ ಒಳಹರಿವು 2,881 ಕ್ಯೂಸೆಕ್ಸ್ ಇದ್ದು, ಹೊರ ಹರಿವು 1,681 ಕ್ಯೂಸೆಕ್ಸ್ ಇದೆ. ಕೇರಳದಲ್ಲಿ ಸ್ವಲ್ಪ ಮಳೆಯಾಗುತ್ತಿರುವ ಕಾರಣ ಕಬಿನಿಯ ಒಳಹರಿವು 4229 ಕ್ಯೂಸೆಕ್ಸ್ ಇದ್ದು ಹೊರಹರಿವು 1,100 ಕ್ಯೂಸೆಕ್ಸ್ ಇದೆ. ಎರಡು ಅಣೆಕಟ್ಟುಗಳ ಒಳಹರಿವು 7,114 ಕ್ಯೂಸೆಕ್ಸ್ ಮತ್ತು ಹೊರ ಹರಿವು 2,781 ಕ್ಯೂಸೆಕ್ಸ್ ಇದೆ. ಇದುವರೆಗು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣ 37 ಟಿಎಂಸಿ. ಒಟ್ಟು 123 ಟಿಎಂಸಿ ನೀರನ್ನು ಹರಿಸಬೇಕಿತ್ತು ಸೆಪ್ಟೆಂಬರ್ ಕೊನೆಯ ವರೆಗೆ 42 ಟಿಎಂಸಿ ನೀರು ಹರಿಸಲಾಗಿದೆ ಎಂದರು.

- Advertisement -

ಕೇಂದ್ರ ಜಲ ನಿಯಂತ್ರಣ ಆಯೋಗ (CWRC) ಅಡಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲಸ ಮಾಡುತ್ತದೆ. 16.06.2018 ರಂದು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಕಾವೇರಿ ನೀರಿನ ವಿಚಾರವಾಗಿ ನೀಡಿತು. 18.05.2018 ರಲ್ಲಿ ನರೇಂದ್ರ ಮೋದಿ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಕಾವೇರಿ ನೀರಿನ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಮಾಡಿ, ಕರ್ನಾಟಕಕ್ಕೆ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ 01.06.2018 ರಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ರಚನೆ ಮಾಡುತ್ತದೆ. ಲೋಕಸಭೆಯಲ್ಲಿ ಯಾವುದೇ ಚರ್ಚೆಗ ಅವಕಾಶ ನೀಡದೆ ಕರ್ನಾಟಕದ ಕೈ ಕಟ್ಟಿ ಹಾಕಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.

ಇದುವರೆಗು 2018 ಕೇಂದ್ರ ಜಲ ಆಯೋಗ 86, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 26 ಸಭೆಗಳನ್ನು ನಡೆಸಿದ್ದಾರೆ. ಇಲ್ಲಿಯ ತನಕ ಈ ಆಯೋಗದವರು ಎಷ್ಟು ಪ್ರಮಾಣದ ನೀರನ್ನು ಬಿಡಬೇಕು ಎನ್ನುವ ಮಾರ್ಗದರ್ಶಿಯನ್ನೇ ತಿಳಿಸಿಲ್ಲ. ಸಾಮಾನ್ಯ ವರ್ಷದಲ್ಲಿ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ನಿರ್ಣಯ ಮಾಡಲಾಗಿದೆ ಅಷ್ಟೇ ಎಂದ ಲಕ್ಷ್ಮಣ್,  ಮಳೆ ಕಡಿಮೆಯಾದ ವರ್ಷದಲ್ಲಿ ಎಷ್ಟು ನೀರು ಬಿಡಬೇಕು ಎನ್ನುವ ಕುರಿತು ಸುಪ್ರೀಂಕೋರ್ಟ್ ಹೀಗೆ ಹೇಳಿದೆ. 4 ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದು ಮಳೆ ಪ್ರಮಾಣ ನೋಡಿಕೊಂಡು ನೀರು ಹರಿಸಬಹುದು ಎಂದು ಹೇಳಿದೆ. 12 ನೇ ತಾರಿಕಿನ ನಂತರ ನಮ್ಮ ಬಳಿ ನೀರಿಲ್ಲ ಎಂದು ನೀರನ್ನು ಹರಿಸುತ್ತಿಲ್ಲ ಎಂದರು.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ನಿಲ್ಲಬೇಕಿರುವುದು ಬಿಜೆಪಿಯವರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಇವರುಗಳು ತುರ್ತು ಸಭೆಗೆ ಬರದೆ ತಪ್ಪಿಸಿಕೊಂಡರು. ಸಭೆ ನಡೆಸದೆ ಇದ್ದರೆ ತುರ್ತು ಸಭೆ ಮಾಡಿ ಎನ್ನುತ್ತೀರ, ಸಭೆ ನಡೆಸಿದರೆ ತುರ್ತು ಸಬೆ ಮಾಡಿದಿರಿ ಅದಕ್ಕೆ ಬರಲು ಆಗುವುದಿಲ್ಲ ಎನ್ನುತ್ತೀರ. ನಿಮ್ಮ ನಿಲುವುಗಳನ್ನು ಸರಿಯಾಗಿ ತಿಳಿಸಿ ಎಂದ ಅವರು, ಲೋಕಸಭಾ ಚುನಾವಣೆಗೆ ಕಾವೇರಿ ನೀರಿನ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ನಿಮಗೆ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಅವರು ಕೇಂದ್ರ ನೀರಾವರಿ ಸಚಿವರು ಹಾಗೂ ನಿಯಂತ್ರಣ ಸಮಿತಿಗೆ ಪತ್ರ ಬರೆದು ತಮಿಳುನಾಡಿನ ಮೋಸವನ್ನು ಬಯಲಿಗೆ ಎಳೆದಿದ್ದಾರೆ. ಇದುವರೆಗು ತಮಿಳುನಾಡು 99.01 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಕರ್ನಾಟಕ ಬಳಕೆ ಮಾಡಿಕೊಂಡಿರುವುದು ಕೇವಲ 24 ಟಿಎಂಸಿ ಮಾತ್ರ ಎಂದರು.

ತಮಿಳುನಾಡಿನ ಬೆಳೆ ವಿಸ್ತೀರ್ಣ 1.08 ಲಕ್ಷ ಹೆಕ್ಟೇರ್ ಆದರೆ 5.26 ಲಕ್ಷ ಹೆಕ್ಟೇರ್ ಗೆ ವಿಸ್ತರಣೆ ಮಾಡಿಕೊಂಡು ಹೆಚ್ಚುವರಿ ನೀರು ಬಳಕೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ಮೋಸ ನಡೆಯುತ್ತಿದ್ದರೂ ಕೇಂದ್ರ ನೀರು ನಿಯಂತ್ರಣ ಆಯೋಗ ಏಕೆ ಸ್ಥಳ ವೀಕ್ಷಣೆಗೆ ಬರುತ್ತಿಲ್ಲ. ಬಿಜೆಪಿಯವರು ನೀರಾವರಿ ಸಮಿತಿಯವರಿಗೆ ನಿರ್ದೇಶನ ನಿಡುತ್ತಿದ್ದಾರೆ, ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿ ಎಂದು. ಆದರೆ ಕರ್ನಾಟಕದ ಬಿಜೆಪಿ ನಾಯಕರು ನೀರು ಬಿಡಬೇಡಿ ಎಂದು ನಾಟಕ ಮಾಡುತ್ತಿದ್ದಾರೆ ಎಂದವರು ಹೇಳಿದರು.

ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಗೆ ಪತ್ರ ಬರೆಯುತ್ತಾರೆ, ಅದು ಕೂಡಲೇ ನೀರು ನಿಯಂತ್ರಣ ಪ್ರಾಧಿಕಾರಕ್ಕೆ, ಕಾವೇರಿ ನೀರು ನಿರ್ವಹಣಾ ಆಯೋಗಕ್ಕೂ ಬರುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದ ಪತ್ರ ಎಲ್ಲಿಗೂ ಹೋಗುವುದಿಲ್ಲ, ಕೇಂದ್ರ ಸಂಸ್ಥೆಗಳು ಬಿಜೆಪಿಯ ನಿರ್ದೇಶನದಂತೆ ಕೆಲಸ ಮಾಡುತ್ತಿವೆ ಎಂದ ಲಕ್ಷ್ಮಣ್, ನಮ್ಮ ಬಳಿ ಒಟ್ಟು 43 ಟಿಎಂಸಿ ನೀರಿದ್ದು 33 ಟಿಎಂಸಿ ಕುಡಿಯಲು, 70 ಟಿಎಂಸಿ ಕೃಷಿಗೆ ಮತ್ತು 3 ಟಿಎಂಸಿ ನೀರು ಕೈಗಾರಿಕೆಗೆ ಬೇಕಾಗಿದೆ. ಹೀಗಿರುವಾಗ ಕರ್ನಾಟಕದ ಬಳಿ ಹರಿಸಲು ನೀರಿಲ್ಲ. 1.85 ಕೋಟಿ ಜನಸಂಖ್ಯೆ ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹಿಂಗಾರು ಮಳೆ ಇನ್ನೇನು ಪ್ರಾರಂಭ ಆಗಲಿದ್ದು 60 ಟಿಎಂಸಿ ನೀರು ತಮಿಳುನಾಡಿಗೆ ಕೇವಲ ಮಳೆಯಿಂದ ಬರಲಿದೆ ಎಂದರು.

ಕುಮಾರಸ್ವಾಮಿ ಅವರೇ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಮಾನ್ಯ ಬಸವರಾಜ ಬೊಮ್ಮಾಯಿ ಅವರೇ ನೀವು ನೀರಾವರಿ ಸಚಿವರಾಗಿದ್ದವರು. ಬಹಿರಂಗ ಚರ್ಚೆಗೆ ಬಂದು ಕಾವೇರಿ ನೀರಿನ ವಿಚಾರವಾಗಿ ತಮ್ಮ, ಸಲಹೆ ಸೂಚನೆಗಳನ್ನು ನೀಡಿ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಹೀಗೆ ನೀರಿನ ವಿಚಾರದ ಮೂಲಕ ಮಾಡಬಾರದು ಎಂದು ಎದುರಾಳಿ ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ- ಜೆಡಿಎಸ್ ಮತ್ತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತಿದ್ದಾರೆ. ಪಕ್ಷಗಳ ಶೇಕಡವಾರು ಮತಗಳಿಕೆ ಪ್ರಮಾಣ ಬಿಜೆಪಿ ಶೇ 36, ಜೆಡಿಎಸ್ 13, ಇತರೇ 6, ಕಾಂಗ್ರೆಸ್ ಪಕ್ಷ 42. ಯಾರೇ ಒಂದಾದರೂ ನಮ್ಮ ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತದೆ. ಜೆಡಿಎಸ್ ಗೆ ಮತ ಹಾಕಿದ ಶೇ 6 ರಷ್ಟು ಅಲ್ಪಸಂಖ್ಯಾತರು, ದಲಿತ, ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಗೆ ಮತಹಾಕಲಿದ್ದಾರೆ ಎಂದರು.

Join Whatsapp