ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕಾತಿ ತಡೆಹಿಡಿಯುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿರುವ ಅಭ್ಯರ್ಥಿಗಳ ಹೆಸರನ್ನು ತಡೆಹಿಡಿಯಬಾರದು. ಇದು ಕಳವಳಕಾರಿ ವಿಷಯವಾಗಿದೆ ಎಂದು ಕೇಂದ್ರ ಸರಕಾರಕ್ಕೆ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ, ವಕೀಲ ಆರ್ ಜಾನ್ ಸತ್ಯನ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದೆ.
ಜನವರಿ 17 ರಂದು ಸತ್ಯನ್ ಅವರ ಹೆಸರನ್ನು ಕೊಲಿಜಿಯಂ ಪುನರುಚ್ಚರಿಸಿದರೂ ಸರ್ಕಾರವು ಇನ್ನೂ ನೇಮಕಾತಿಯನ್ನು ಅನುಮೋದಿಸಿಲ್ಲ.
ತನ್ನ ಶಿಫಾರಸುಗಳನ್ನು ತಡೆಹಿಡಿಯಬಾರದು ಅಥವಾ ಕಡೆಗಣಿಸಬಾರದು ಎಂದು ಕೊಲಿಜಿಯಂ ಮಂಗಳವಾರ ಹೇಳಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ. ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದೆ ಮತ್ತು ಇದು ಗಂಭೀರ ಕಳವಳದ ವಿಷಯವಾಗಿದೆ ಎಂದು ಅದು ಹೇಳಿದೆ.