►ವಯನಾಡು ದುರಂತದ ಬಳಿಕ ಕಸ್ತೂರಿ ರಂಗನ್ ವರದಿ ಬಗ್ಗೆ ನಿಲುವು ಸಡಿಲಿಸಿದ ಮಾಜಿ ಅರಣ್ಯ ಸಚಿವ
ಮಂಗಳೂರು : ಅರಣ್ಯ ಸಚಿವರಾಗಿದ್ದ ವೇಳೆ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ರಮಾನಾಥ ರೈ ಅವರು ವಯನಾಡು ದುರಂತದ ಬಳಿಕ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜನವಸತಿಗೆ ತೊಂದರೆ ಆಗದಂತೆ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕಸ್ತೂರಿ ರಂಗನ್ ವರದಿ ಜಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ವಿರೋಧದ ಕಾರಣಕ್ಕೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ, ನಾನು ಅರಣ್ಯ ಮಂತ್ರಿಯಾಗಿದ್ದಾಗ ವರದಿಗೆ ವಿರೋದ ಮಾಡಿದ್ದೆ, ಎಲ್ಲಾ ಪಕ್ಷಗಳ ಸರಕಾರಗಳು ಕೂಡ ವಿರೋಧ ಮಾಡಿವೆ ಎಂದರು. ಈಗ ವಯನಾಡು ದುರ್ಘಟನೆ ಬಳಿಕ ಕಸ್ತೂರಿ ರಂಗನ್ ವರದಿ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ, ಜನವಸತಿಗೆ ತೊಂದರೆಯಾಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕೇಂದ್ರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಬೇಕಿರುವುದು ಕೇಂದ್ರ ಸರಕಾರ, ವರದಿ ಜಾರಿ ಮಾಡಲು ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದರು. ರಾಜ್ಯಗಳಿಗೆ ತಿರಸ್ಕಾರ ಮಾಡಲು ಕೂಡ ಆಗಲ್ಲ, ರಾಜ್ಯಗಳಿಗೆ ಕೇವಲ ಅಭಿಪ್ರಾಯ ಹೇಳಲು ಅವಕಾಶ ಇದೆ. ವರದಿ ಜಾರಿ ಬಗ್ಗೆ ಕೇಂದ್ರ ಸರಕಾರವೇ ತೀರ್ಮಾನ ತೆಗೆದುಕೊಳ್ಳಬೇಕು, ಲೋಪದೋಷ ಇದ್ದರೆ ಸರಿಪಡಿಸಿಕೊಂಡು ತೀರ್ಮಾನ ಮಾಡಲಿ ಎಂದರು.