ನೋಯ್ಡಾ: ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೀರ್ಘ 13 ತಿಂಗಳುಗಳ ಕಾಲ ನಡೆದ ಪ್ರತಿಭಟನೆ ವೇಳೆ ರೈತರನ್ನು ಬಿಜೆಪಿ ನಾಯಕರು ಭೇಟಿ ಮಾಡಿಲ್ಲ. ‘ನಮಗೆ ಇಂತಹ ಸರ್ಕಾರ ಬೇಕಾ’ ಎಂದು ಕೇಂದ್ರ ಸರ್ಕಾರದ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ‘ಮಿಷನ್ ಯುಪಿ’ ಭಾಗವಾಗಿ ಬುಧವಾರ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಸೇರಿದಂತೆ ಇತರ ರೈತ ಮುಖಂಡರೊಂದಿಗೆ ರಾಕೇಶ್ ಟಿಕಾಯತ್ ಅವರು ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಭೆ ನಡೆಸಿದ್ದರು.
ಈ ವೇಳೆ ಸುದ್ದಿಗಾರರು ಕೇಳಿದ ಉತ್ತರ ಪ್ರದೇಶದಲ್ಲಿ ಈ ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ (ಎಸ್‌ಪಿ) ಸರ್ಕಾರ ಉತ್ತಮವಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಿರುವ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಅಂದಿನ ಸರ್ಕಾರ ಉತ್ತಮವಾಗಿತ್ತು’ ಎಂದು ಹೇಳಿದರು.
‘ಇತ್ತೀಚೆಗೆ ರಾಜಕೀಯ ಪಕ್ಷಗಳು ರೈತರ ಬಗ್ಗೆ ಮಾತನಾಡಲು ಪ್ರಾರಂಭಿಸಿವೆ. ಇದು ರೈತ ಸಂಘಟನೆಗಳ ದೊಡ್ಡ ಸಾಧನೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದು ನಮಗೆ ತಿಳಿದಿಲ್ಲ, ಆದರೆ, ಯಾರೇ ಸರ್ಕಾರ ರಚಿಸಿದರೂ ರೈತರ ಭರವಸೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಸರಕುಗಳ ಬೆಲೆಗಳನ್ನು ಪರಿಶೀಲಿಸುವ ಬದಲು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡದ ಕಾರಣ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ ಎಂದು ಟಿಕಾಯತ್ ಟೀಕಿಸಿದ್ದಾರೆ.