ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸಂಸತ್ ಭವನದ ಬಳಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿ ಈಗ ತ್ವರಿತಗತಿಯಲ್ಲಿ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದರ ಬಳಿಯಲ್ಲೇ ಇರುವ ಒಂದು ಪರಂಪರಾತ್ಮಕ ಮಸೀದಿಯ ಉಳಿವಿನ ಬಗ್ಗೆ ಇದೀಗ ಆತಂಕ ವ್ಯಕ್ತವಾಗಿದೆ.
ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿ ವೇಳೆ ಲುಟಿನ್ಸ್ ಪ್ರದೇಶದ ಪರಂಪರೆ ಮಸೀದಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ವಕ್ಫ್ ಬೋರ್ಡ್ ಪತ್ರ ಬರೆದಿದೆ.
ದೆಹಲಿಯ ಲುಟಿನ್ಸ್ ಪ್ರದೇಶದಲ್ಲಿರುವ ಕೆಲವು ಮಸೀದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಕೃಷಿ ಭವನದ ಆವರಣದಲ್ಲಿರುವ ಝಬ್ತಾ ಗಂಜ್ ಮಸೀದಿ ಮತ್ತು ಉಪರಾಷ್ಟ್ರಪತಿ ನಿವಾಸದ ಆವರಣದೊಳಗೆ ಇರುವ ಮಸೀದಿಗಳು ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿ ವೇಳೆ ಕೆಡವಲಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಎಎಪಿ ಶಾಸಕ, ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.
ಸುನೇರಿ ಬಾಗ್ ರೋಡ್ ಮಸೀದಿ ಮತ್ತು ರೆಡ್ ಕ್ರಾಸ್ ರೋಡ್ ಬಳಿಯ ಜಮಾ ಮಸೀದಿ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಎರಡು ಮಸೀದಿಗಳನ್ನು ಕೆಡವಿದ ಬಳಿಕ ಈ ಆತಂಕ ಹೆಚ್ಚಾಗಿದೆ. ಮಸೀದಿಗಳು ಅಥವಾ ವಕ್ಫ್ ಆಸ್ತಿಗಳ ಬಗ್ಗೆ ಯೋಜನೆಯ ಯಾವುದೇ ಅಧಿಕಾರಿಗಳು ದೆಹಲಿ ವಕ್ಫ್ ಬೋರ್ಡ್ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ.