ಸೆಂಟ್ರಲ್ ವಿಸ್ಟಾ: ಭೂ ಬಳಕೆ ಬದಲಾವಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ : ದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದ ಭೂ ಬಳಕೆಯಲ್ಲಿ ಬದಲಾವಣೆಯನ್ನು ಸೂಚಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

- Advertisement -


ಇದು ನೀತಿ ನಿರೂಪಣೆಯ ವಿಚಾರವಾಗಿರುವುದರಿಂದ ಅರ್ಜಿದಾರರು ಯೋಜನೆಯ ದುರುದ್ದೇಶದ ಬಗ್ಗೆ ಆರೋಪ ಮಾಡದ ವಿನಾ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಹೇಳಿತು.


“ಭೂ ಬಳಕೆಯ ಪರಿವರ್ತನೆಯ ಹಿಂದೆ ದುರುದ್ದೇಶವಿದೆ ಎಂದು ಅರ್ಜಿದಾರರು ವಾದಿಸಿಲ್ಲ. ಹಿಂದೆ ಇದು ಮನರಂಜನಾ ಪ್ರದೇಶವಾಗಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಅರ್ಜಿದಾರರ ವಾದವಾಗಿದೆ. ಇದು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೆ ಬರಲು ಸಾಧ್ಯವಿಲ್ಲ. ಇದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮತ್ತು ಸಾರ್ವಜನಿಕ ನೀತಿಗೆ ಸಂಬಂಧಿಸಿದ ವಿಷಯವಾಗಿದೆ” ಎಂದು ಕೋರ್ಟ್ ತೀರ್ಪು ನೀಡಿದೆ.

- Advertisement -


ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದ್ದು ದೆಹಲಿಯ ನಿವಾಸಿಗಳ ತೆರೆದ ಜಾಗವನ್ನು ಕಸಿದುಕೊಂಡು ಸೆಂಟ್ರಲ್ ವಿಸ್ಟಾಕ್ಕೆ ಸ್ಥಳಾವಕಾಶ ಮಾಡಿಕೊಡುತ್ತದೆ ಎಂದು ರಾಜೀವ್ ಸೂರಿ ಸಲ್ಲಿಸಿದ್ದ ಮತ್ತು ವಕೀಲ ಶಿಖಿಲ್ ಸೂರಿ ವಾದ ಮಂಡಿಸಿದ್ದ ಪ್ರಕರಣದಲ್ಲಿ ಪ್ರತಿಪಾದಿಸಲಾಗಿತ್ತು. ಈ ಬದಲಾವಣೆಯಿಂದಾಗಿ ಮಕ್ಕಳ ಮನರಂಜನಾ ಆಟದ ಮೈದಾನ ಹಾಗೂ ಸಮೂಹ ಸಾರಿಗೆ ವ್ಯವಸ್ಥೆಗಳ ಹಕ್ಕನ್ನು ಕಳೆದುಕೊಳ್ಳುತ್ತದೆ ಎಂದು ವಾದಿಸಲಾಗಿತ್ತು.


ಭಾರತದ ಜನತೆಗೆ ಸೇರಿದ ತೆರೆದ ಸ್ಥಳವನ್ನು ಅಧಿಸೂಚನೆಯನ್ನು ಹೊರಡುವು ಮೂಲಕ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲಾಗಿದೆ. ಇದು ಜನತೆ ನೆನಪಿಡುವ ಸ್ಥಳವಾಗಿದ್ದು ತಮ್ಮ ರಾಷ್ಟ್ರೀಯತೆಯ ದ್ಯೋತಕವಾಗಿ ಜನರು ಇದನ್ನು ಪರಿಗಣಿಸುತ್ತಾರೆ ಎಂದು ಅರ್ಜಿದಾರರು ಹೇಳಿದ್ದರು.
(ಕೃಪೆ: ಬಾರ್ & ಬೆಂಚ್)



Join Whatsapp