‘ದೇಶದ್ರೋಹ ಕಾಯ್ದೆ’ ಬಳಕೆ ಸಮರ್ಥಿಸಿದ ಕೇಂದ್ರ ಸರಕಾರ | ಅರ್ಜಿ ವಜಾಗೊಳಿಸುವಂತೆ ‘ಸುಪ್ರೀಂ’ಗೆ ಮನವಿ

Prasthutha|

ದೆಹಲಿ: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರಕಾರವು, ಬ್ರಿಟಿಷ್ ಕಾಲದ ಕಾನೂನಿನ ಬಳಕೆಯನ್ನು ಸಮರ್ಥಿಸಿಕೊಂಡಿತು.

- Advertisement -

ದೇಶದ್ರೋಹ ಕಾಯ್ದೆ ಬಳಕೆ ಕುರಿತು ಮೂರು ದಿನಗಳ ಹಿಂದೆ ಉತ್ತರಿಸುವಂತೆ ಮತ್ತೊಂದು ಅವಕಾಶವನ್ನು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿತ್ತು.

ಅಲ್ಲದೇ, ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ತನ್ನ ಉತ್ತರವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ. ಈ ಮೂಲಕ ದೇಶಾದ್ಯಂತ ಹಲವು ಹೋರಾಟಗಾರರ ಮೇಲೆ ದೇಶದ್ರೋಹ ಕಾಯ್ದೆಯ 124ಎ ಅಡಿ ದಾಖಲಿಸಲಾದ ಪ್ರಕರಣಗಳನ್ನು ಕೇಂದ್ರವು ಪರೋಕ್ಷವಾಗಿ ಸಮರ್ಥಿಸಿಕೊಂಡಿತು.

- Advertisement -

ಈಗಾಗಲೆ ಸಾಂವಿಧಾನಿಕ ಪೀಠವು ದೇಶದ್ರೋಹ 124ಎ ಕಾಯ್ದೆಯನ್ನು ಸಮರ್ಥವಾಗಿ ಪರಿಶೀಲಿಸಿದೆ. ಹಾಗಾಗಿ ತ್ರಿಸದಸ್ಯ ಪೀಠವು ಮತ್ತೊಮ್ಮೆ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರವು ಹೇಳಿತು.

ಬಿಜೆಪಿ ನೇತೃತ್ವದ ಸರಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಲವು ಹೋರಾಟಗಾರರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ದೇಶದ್ರೋಹ ಕಾಯ್ದೆಯನ್ನು ಪ್ರಯೋಗಿಸಿತ್ತು. ಇದನ್ನು ಪ್ರಶ್ನಿಸಿ ಸಂಸದೆ (ಟಿಎಂಸಿ ಪಕ್ಷ) ಮಹುವಾ ಮೊಯಿತ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.  

Join Whatsapp