ಬೆಂಗಳೂರು: 5 ವರ್ಷದಿಂದ ಕನ್ನಡಧ್ವಜಕ್ಕೆ ಕೇಂದ್ರ ಸರಕಾರ ಅನುಮತಿ ಕೊಡುತ್ತಿಲ್ಲ ಎಂಧೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ನಾಡಿಗೆ ಪ್ರತ್ಯೇಕವಾಗಿ ನಾಡಗೀತೆಯನ್ನು ಒಪ್ಪಿಕೊಂಡಂತೆ ಕನ್ನಡ ಧ್ವಜವನ್ನೂ ವಿನ್ಯಾಸಗೊಳಿಸಿ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ 5 ವರ್ಷಗಳ ಹಿಂದೆಯೇ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೂ, ಕೇಂದ್ರ ಸರ್ಕಾರ ಕನ್ನಡ ಧ್ವಜಕ್ಕೆ ಅನುಮತಿಯನ್ನು ಕೊಟ್ಟಿಲ್ಲವೆಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ..
ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡ ದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ ಎಂದು X ನಲ್ಲಿ ಬರೆದಿದ್ದಾರೆ.
ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ: ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ, ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜಗಳನ್ನು ಹಾರಿಸಬಹುದೆಂದು ರಾಷ್ಟ್ರಧ‍್ವಜ ಸಂಹಿತೆಯೇ ಹೇಳಿದೆ. ಹೀಗಿರುವಾಗ ಯಾಕೆ ಕನ್ನಡಿಗರ ಬಗ್ಗೆ ನಿಮಗೆ ತಾತ್ಸಾರ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಸಮಸ್ತ ಜನರ ಪ್ರಶ್ನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ತೋಡಿಕೊಂಡಿದ್ದಾರೆ.